ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: : ಪಟ್ಟಣದ ಪಿಎಂಶ್ರೀ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ನಂ.4ರಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಜಯಲಕ್ಷ್ಮೀ ಶಿವಪ್ಪ ಗುಡಗೇರಿ ಗದಗ ಜಿಲ್ಲಾ ಶಿಕ್ಷಣ ಇಲಾಖೆಯ `ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
1995ರಲ್ಲಿ ಸೇವೆಗೆ ಸೇರಿದ ಜಯಲಕ್ಷ್ಮೀ ಗುಡಗೇರಿ ಅವರು ತಮ್ಮ ಪ್ರಾಮಾಣಿಕ ಶಿಕ್ಷಣ ಸೇವೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಪ್ರಸ್ತುತ ತಾಲೂಕಿನ ಸೇವಾದಳದ ಅಧಿನಾಯಕಿಯಾಗಿ, ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದ ಮುಂದಾಳತ್ವವನ್ನು ಕೂಡ ವಹಿಸಿ ಮಕ್ಕಳೆಲ್ಲರ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಾರೆ. 2015ರಿಂದ 2020ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಿಳಾ ಉಪಾಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ವಿಶೇಷವೆಂದರೆ, ಇವರು ಇದೇ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಶಿಕ್ಷಣ ಪಡೆದು ಅದೇ ಶಾಲೆಗೆ ಶಿಕ್ಷಕಿಯಾಗಿ ನೇಮಕಗೊಂಡಿದ್ದಲ್ಲದೇ 30 ವರ್ಷಗಳ ಕಾಲ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ಮುಂದಿನ 9 ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ.
ಗದಗ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಇವರಿಗೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ, ವಿದ್ಯಾರ್ಥಿ ಬಳಗದವರು ಹರ್ಷ ವ್ಯಕ್ತಪಡಿಸಿದ್ದಾರೆ.