ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಲ್ಲಿನ ಹೂವಿನ ಶಿಗ್ಲಿಯ ಶ್ರೀ ವಿರಕ್ತಮಠದಲ್ಲಿ ಹಾನಗಲ್ ಗುರು ಕುಮಾರೇಶ್ವರರ 157ನೇ ಜಯಂತ್ಯುತ್ಸವವನ್ನು ಭಾನುವಾರ ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಶ್ರೀಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಯುವಪುರುಷ ಹಾನಗಲ್ಲ ಶ್ರೀ ಗುರು ಕುಮಾರೇಶ್ವರರು ಸಮಾಜದ ಉದ್ಧಾರಕ್ಕಾಗಿ ಜನಿಸಿದ ಸಮಾಜದ ಸಂಜೀವಿನಿಯಾಗಿದ್ದಾರೆ. ಧರ್ಮ, ಶಿಕ್ಷಣ, ಸಂಗೀತ, ಸಂಸ್ಕಾರ, ಯೋಗ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅಮೋಘ. ಅವರು ಸ್ಥಾಪಿಸಿದ ವೀರಶೈವ ಮಹಾಸಭಾ ಮತ್ತು ಶಿವಯೋಗ ಮಂದಿರ ಈಗಲೂ ನಾಡಿಗೆ ಶ್ರೇಷ್ಠ ಶರಣರು, ಮಠಾಧೀಶರನ್ನು ನಾಡಿಗೆ ನೀಡುವ ಆಧ್ಯಾತ್ಮದ ಶಕ್ತಿ ಕೇಂದ್ರವಾಗಿದೆ. ದೇಶದಾದ್ಯಂತ ಸಂಚಾರ ಮಾಡಿ ಭಕ್ತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟ ಶ್ರೇಷ್ಠ ಸನ್ಯಾಸಿಗಳು ಹಾನಗಲ್ಲ ಗುರು ಕುಮಾರೇಶ್ವರ ಮಹಾಸ್ವಾಮಿಗಳು. ಅವರ ತತ್ವ ಚಿಂತನೆಗಳನ್ನ ಪ್ರಸ್ತುತ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಸುಂದರವಾಗಿಸಲು ಸಾಧ್ಯವಾಗುತ್ತದೆ ಎಂದರು.
ಈ ವೇಳೆ ಭಕ್ತರಾದ ಪಿ.ಹೆಚ್. ಪಾಟೀಲ, ಕಿರಣ ಕುಬಸದ, ಶಾಂತಪ್ಪ ರಾಮಗೇರಿ, ಉಮೇಶ ಮಾಗಡಿ, ಶಿವಲಿಂಗಯ್ಯ ಹಿರೇಮಠ, ಶಿವಾನಂದ ಕಟ್ಟಿಮನಿ ಸೇರಿ ಶ್ರೀ ಮಠದ ಗುರುಕುಲದ ವಿದ್ಯಾರ್ಥಿಗಳು, ಸದ್ಭಕ್ತರು ಭಾಗವಹಿಸಿದ್ದರು.