ರಾಮನಗರ: ಸಿ.ಪಿ.ಯೋಗೇಶ್ವರ್ ಗೆಲುವಿಗೆ ಜೆಡಿಎಸ್, ಬಿಜೆಪಿಯವರು ಬೆಂಬಲಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್, ಬಿಜೆಪಿನವರೂ ಸಪೋರ್ಟ್ ಮಾಡಿದ್ದಾರೆ. ಅಶ್ವಥ್ ನಾರಾಯಣ್ ಯೋಗೇಶ್ವರ್ ಗೆಲ್ತಾರೆ ಅಂತ ಗೊತ್ತಿತ್ತು ಅಂದ್ರು, ಇದರ ಅರ್ಥ ಏನು? ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮ ಮೇಲೆ ಈಗ ಕ್ಷೇತ್ರದ ಜನರ ಸಾಲ ಇದೆ, ಕ್ಷೇತ್ರದ ಜನ ನಮ್ಮ ಪರವಾಗಿ ಇದ್ದಾರೆ. ಈ ಗೆಲುವಿನ ಕ್ರೆಡಿಟ್ ಅಪೂರ್ವ ಸಹೋದರಿಗೆ ಸಲ್ಲಬೇಕಾಗಿಲ್ಲ, ನಮ್ಮೆಲ್ಲ ನಾಯಕರು, ಮತದಾರಿಗೆ ಸಲ್ಲಬೇಕು. ಕ್ಷೇತ್ರ ಖಾಲಿ ಆದಾಗಿನಿಂದ ಸಾಕಷ್ಟು ಪ್ರವಾಸ ಮಾಡಿದ್ವಿ. ಕ್ಷೇತ್ರದ ಜನರಿಗೆ ಏನು ಮಾತು ಕೊಟ್ಟಿದ್ವೊ ಅದನ್ನ ಮೊದಲು ಅನುಷ್ಠಾನ ಮಾಡಬೇಕು. ನಾನು ಯೋಗೇಶ್ವರ್, ಇಬ್ಬರೂ ಕೂತು ಚರ್ಚೆ ಮಾಡಿ ಇದಕ್ಕೆಲ್ಲ ಚಾಲನೆ ಕೊಡ್ತೇವೆ ಎಂದು ಭರವಸೆ ನೀಡಿದ್ದಾರೆ.