ಬೀದರ್:- ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಬೀದರ್ ಜಿಲ್ಲೆಯ ವಿವಿಧೆಡೆಯ ರೈತರ ಜಮೀನುಗಳಿಗೆ ಗುರುವಾರ ಭೇಟಿ ನೀಡಿ ಬರ ಅಧ್ಯಯನ ನಡೆಸಿದರು.
ಜಿಲ್ಲೆಯ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಮಠಾಣಾ ರೈತ ಸಂಪರ್ಕ ಕೇಂದ್ರ, ಬಗದಲ್ ರೈತ ಸಂಪರ್ಕ ಕೇಂದ್ರ, ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಜನವಾಡ ರೈತ ಸಂಪರ್ಕ ಕೇಂದ್ರ, ಔರಾದ ವಿಧಾನಸಭಾ ಕ್ಷೇತ್ರದ ದಾಬಕಾ ರೈತ ಸಂಪರ್ಕ ಕೇಂದ್ರ ಸೇರಿದಂತೆ ವಿವಿಧ ರೈತ ಸಂಪರ್ಕ ಕೇಂದ್ರಗಳ ಖಾಶೆಂಪುರ್, ಕಾಡವಾದ, ಬಗದಲ್ ತಾಂಡ, ಮರಕಲ್, ಮುರ್ಕಿ, ಚಿಕ್ಲಿ, ಗಣೇಶಪೂರ್ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಮಳೆಯ ಕೊರತೆಯಿಂದ ಹಾಳಾದ ತೊಗರಿ ಸೇರಿದಂತೆ ವಿವಿಧ ಬೆಳಗಳನ್ನು ವೀಕ್ಷಿಸಿ, ರೈತರೊಂದಿಗೆ ಚರ್ಚಿಸಿದರು.
ಪರಿಹಾರಕ್ಕೆ ಒತ್ತಾಯಿಸಿ ಶುಕ್ರವಾರ ಮುಖ್ಯಮಂತ್ರಿಗೆ ಮನವಿ: ಬಂಡೆಪ್ಪ ಖಾಶೆಂಪುರ್
ಜೆಡಿಎಸ್ ಪಕ್ಷದ ಪ್ರಮುಖರೊಂದಿಗೆ ಬೆಳೆ ವೀಕ್ಷಣೆ ನಡೆಸಿ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು, ಮಳೆಯ ಕೊರತೆಯಿಂದಾಗಿ ಬಹುತೇಕ ರೈತರು ಬೆಳೆ ಕಳೆದುಕೊಂಡಿದ್ದಾರೆ. ಬಿತ್ತನೆ ಮಾಡಿದ ಬೆಳೆ ಚನ್ನಾಗಿ ಮೊಳಕೆ ಬಂದಿದೆಯಾದರು ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಫಲಕ್ಕೆ ಬರಬೇಕಾದ ಬೆಳೆ ಕೈಕೊಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಈಗಾಗಲೇ ಬೀದರ್ ಜಿಲ್ಲೆಯ ವಿವಿಧೆಡೆ ಬೆಳೆ ವೀಕ್ಷಣೆ ನಡೆಸಿದ್ದೇನೆ. ನಮ್ಮ ರೈತರ ಸಂಕಷ್ಟದ ಪರಿಸ್ಥಿತಿಯ ಕುರಿತು ಸರ್ಕಾರದ ಗಮನಕ್ಕೆ ತರುತ್ತೇವೆ. ಶುಕ್ರವಾರ ಬೀದರ್ ನಗರದಲ್ಲಿನ ಜೆಡಿಎಸ್ ಕಛೇರಿಯಿಂದ ಜಿಲ್ಲಾಧಿಕಾರಿ ಕಛೇರಿಯವರಿಗೆ ಪಾದಯಾತ್ರೆ ಮೂಲಕ ಬಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಶೀಘ್ರವಾಗಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸುತ್ತೇವೆ.
ನಾನು ಈಗಾಗಲೇ ಜಿಲ್ಲೆಯ ರೈತರೊಂದಿಗೆ ಸಂವಾದ ನಡೆಸಿದ್ದೇನೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬಹುತೇಕ ರೈತರು ದುಃಖ ವ್ಯಕ್ತಪಡಿಸಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬೆಳೆ ವಿಮೆ ಕೂಡ ಸರಿಯಾಗಿ ತಲುಪುತ್ತಿಲ್ಲ. ಎಲ್ಲಾ ರೀತಿಯಿಂದಲೂ ರೈತರು ಸಂಕಷ್ಟದಲ್ಲಿದ್ದೇವೆ. ಸರ್ಕಾರದ ನೆರವು ಅಗತ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಕೃಷಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಜೆಡಿಎಸ್ ನಿಯೋಗ:
ಬರ ಅಧ್ಯಯನಕ್ಕಾಗಿ ಬೀದರ್ ಜಿಲ್ಲೆಯ ವಿವಿಧೆಡೆ ಸಂಚಾರ ನಡೆಸಿದ ಜೆಡಿಎಸ್ ನಾಯಕರು ಕೃಷಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.