ವಿಜಯಸಾಕ್ಷಿ ಸುದ್ದಿ, ಗದಗ : ಕ್ರೈಂ, ಕಮಿಷನ್ ಮತ್ತು ಕರಪ್ಷನ್ ರಾಜ್ಯದ ಕಾಂಗ್ರೆಸ್ ಸರಕಾರದ ಒಂದು ವರ್ಷದ ಸಾಧನೆಯಾಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಆರೋಪಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಕಮಿಷನ್ ಮತ್ತು ಕರಪ್ಷನ್ (ಭ್ರಷ್ಟಾಚಾರ) ಮಿತಿಮೀರಿದೆ. ಅದರ ಜೊತೆಗೆ ಸಾಲ, ಸುಳ್ಳು ಮತ್ತು ಸಾವುಗಳೂ ಏರಿಕೆಯಾಗಿವೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್, ಹುಬ್ಬಳ್ಳಿಯಲ್ಲಿ ನೇಹಾ, ಅಂಜಲಿ ಕೊಲೆಯಾಯಿತು. ಅಧಿವೇಶನ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತçಗೊಳಿಸಿದ ಘಟನೆ ನಡೆಯಿತು. ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್ ಹೀಗೆ ಹತ್ತಾರು ಘಟನೆಗಳು ನಡೆದಿದೆ. ಇದಕ್ಕೆಲ್ಲಾ ಕಾಂಗ್ರೆಸ್ ಸರಕಾರದ ವೈಫಲ್ಯಗಳೇ ಕಾರಣವಾಗಿದೆ. ಇದೇ ಕಾಂಗ್ರೆಸ್ ಸರಕಾರದ ವರ್ಷದ ಸಾಧನೆ ಎಂದು ಲೇವಡಿ ಮಾಡಿದರು.
ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಮಾತನಾಡುವ ರಾಜ್ಯ ಸರಕಾರ ಸುಳ್ಳು ಅಂಕಿ-ಸಂಖ್ಯೆಗಳನ್ನು ಕೊಟ್ಟು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ರಾಜ್ಯದ ಜನಸಂಖ್ಯೆ 6 ಕೋಟಿ ಇದೆ. ಆ ಪೈಕಿ 4.90 ಕೋಟಿ ಜನ ಗ್ಯಾರಂಟಿ ಫಲಾನುಭವಿಗಳಿದ್ದಾರೆ ಎನ್ನುವುದು ಇದಕ್ಕೆ ಸಾಕ್ಷಿಯಾಗಿದೆ. ಸಮೀಕ್ಷೆ ಪ್ರಕಾರ ಕೇವಲ 1.20 ಕೋಟಿ ಜನರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು ತಲುಪಿವೆ. ಒಂದೆಡೆ ಮನೆಗಳಿಗೆ ಉಚಿತ ವಿದ್ಯುತ್ ಕೊಟ್ಟು, ಅದೇ ಮನೆಯ ಯಜಮಾನ ಕೆಲಸ ಮಾಡುವ ಅಂಗಡಿಯ ವಿದ್ಯುತ್ ದರ ಏರಿಕೆ ಮಾಡಿದ್ದಾರೆ. ಈ ರೀತಿ ಮಾಡಿದರೆ ಗ್ಯಾರಂಟಿ ಯೋಜನೆಯ ಲಾಭವಾದರೂ ಏನು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಗಿರೀಶ ಸಂಶಿ, ಬಸವರಾಜ ಅಪ್ಪಣ್ಣವರ, ಜೋಸೆಫ್ ಉದೋಜಿ, ಎಂ.ಎಸ್. ಪರ್ತಗೌಡ್ರ, ಪ್ರಫುಲ್ ಪುಣೇಕರ್, ತಿಪ್ಪಣ್ಣ ಹುಡೇದ, ಕೆ.ಎಫ್. ದೊಡ್ಡಮನಿ ಇದ್ದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಜೆಡಿಎಸ್ ಸಂತ್ರಸ್ಥರ ಬಗ್ಗೆ ಮಾತನಾಡುವುದಿಲ್ಲ ಎಂದು ಆರೋಪಿಸಲಾಗುತ್ತಿದೆ. ಸಂತ್ರಸ್ಥರ ಬಗ್ಗೆ ಮಾತನಾಡಿದರೆ ಅವರ ಮಾನಹಾನಿಯಾಗುತ್ತದೆ ಎನ್ನುವ ಕಾರಣಕ್ಕೆ ಜೆಡಿಎಸ್ ಮೌನವಾಗಿದೆ. ಆದರೆ ಸಂತ್ರಸ್ಥರಿಗೆ ನ್ಯಾಯ ಸಿಗಲೇಬೇಕು ಎಂದ ಅವರು, ಪ್ರಜ್ವಲ್ ರೇವಣ್ಣ ದೇಶಬಿಟ್ಟು ಹೋಗಲು ಸರಕಾರವೇ ಕಾರಣ. ಅದೇ ರೀತಿ ಶಿವರಾಮೇಗೌಡ ಅವರಿಗೆ ನೋಟಿಸ್ ಕೊಡುವ ಕೆಲಸ ಮಾಡಿಲ್ಲ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.