ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜೀವನದಲ್ಲಿ ತಾನು ಏನೆಲ್ಲ ತೊಂದರೆ ಎದುರಿಸಿದರೂ ಸರ್ವರಿಗೂ ಲೇಸನ್ನೇ ಬಯಸಿದವರು ಏಸುಕ್ರಿಸ್ತರು. ಅವರ ಜನ್ಮ ದಿನವಾದ ಇಂದು ಈ ಲೋಕದ ಎಲ್ಲ ಜನತೆಗೆ ಇನ್ನಷ್ಟು ಶಾಂತಿ, ನೆಮ್ಮದಿ ನೀಡೆಂದು ಅವರಲ್ಲಿ ಪ್ರಾರ್ಥಿಸೋಣ ಎಂದು ಡಾ. ಡ್ಯಾನಿಯಲ್ ಹೇಳಿದರು.
ಪಟ್ಟಣದ ಜಕ್ಕಲಿ ರಸ್ತೆಯಲ್ಲಿರುವ ವಿನ್ಸೆಂಟ್ ಮೆಮೋರಿಯಲ್ ಚರ್ಚ್ ನಲ್ಲಿ ಆಚರಿಸಲಾದ ಕ್ರಿಸ್ಮಸ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಏಸುವಿನ ಸಂದೇಶವು ಸರ್ವರ ಏಳಿಗೆಗಾಗಿ ಇದೆ. ಮಾನವ ಕಲ್ಯಾಣವನ್ನು ತನ್ನ ಜೀವನದ ಗುರಿಯನ್ನಾಗಿಸಿಕೊಂಡಿದ್ದ ಏಸು, ಮಾನವರಲ್ಲಿನ ಸಣ್ಣತನದ ಗುಣಗಳನ್ನು ಕಳೆಯಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಬಾಳು, ಇತರರನ್ನು ಬಾಳಲು ಬಿಡು ಎಂಬುದು ಏಸುವಿನ ಮಹತ್ವದ ಸಂದೇಶಗಳಲ್ಲಿ ಒಂದಾಗಿದೆ. ಇದನ್ನು ಅರಿತು ನಾವೆಲ್ಲರೂ ನಡೆದರೆ ನಮ್ಮ ಬಾಳು ಬಂಗಾರವಾಗುತ್ತದೆ. ಯಾರನ್ನೂ ದ್ವೇಷಿಸದೆ, ಎಲ್ಲರೊಂದಿಗೆ ಪ್ರೀತಿ, ಸೌಹಾರ್ದತೆಯಿಂದ ಬದುಕಿದ್ದೇ ಆದರೆ ಎಲ್ಲರ ಜೀವನವೂ ಪವಿತ್ರ ಜೀವನವಾಗುತ್ತದೆ ಎಂದು ಹೇಳಿದರು.
ಪ್ರೀತಿ, ತ್ಯಾಗ, ಸಹನೆ ಮತ್ತು ಶಾಂತಿಯ ಪ್ರತಿರೂಪ ಏಸುವಾಗಿದ್ದಾರೆ. ಅವರ ತತ್ವಗಳನ್ನು ನಾವು ಅರ್ಥ ಮಾಡಿಕೊಂಡು ನಮ್ಮ ಜೀವನವನ್ನು ಸಾಗಿಸುವುದು ಅವಶ್ಯಕವಾಗಿದೆ. ದುಃಖದಲ್ಲಿದ್ದ ಜನರ ಮನದ ನೋವನ್ನು ಕಳೆಯಲೆಂದೇ ಏಸುವಿನ ಜನನವಾಗಿದೆ. ಇಂದು ಅವರು ಹುಟ್ಟಿದ ದಿನವನ್ನು ಆಚರಿಸುತ್ತಿರುವ ನಾವೆಲ್ಲ ಅವರನ್ನು ಸ್ತುತಿಸುವ, ಅವರ ಸಂದೇಶಗಳನ್ನು ಸಾರುವ ಬೈಬಲ್ ಓದಿ, ಅವರ ಸ್ಮರಣೆಯೊಂದಿಗೆ ಅವರನ್ನು ನೆನಸಿಕೊಂಡು ಪ್ರೀತಿಯಿಂದ ಬಾಳೋಣ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಕ್ರೆಸ್ತ ಬಾಂಧವರೆಲ್ಲರೂ ಉಪಸ್ಥಿತರಿದ್ದರು.



