ಗದಗ:- ಜಿಲ್ಲೆಯ ನರೇಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ ಸಂಬಂಧ ಇಬ್ಬರನ್ನು ಅರೆಸ್ಟ್ ಮಾಡಲಾಗಿದ್ದು, ಮನೆಗೆಲಸದಾಕೆ ನರಗುಂದ ಮೂಲದ 30 ವರ್ಷದ ಪ್ರಭಾವತಿ ಪಾಟೀಲ, ರಾಜಸ್ಥಾನ ಮೂಲದ ಬೇಕರಿ ಕೆಲಸಗಾರ ಲಖನಸಿಂಗ್ ಠಾಕೂರ ಬಂಧಿತರು. ಬಂಧಿತರಿಂದ 67.45 ಗ್ರಾಂ ತೂಕದ ಬಂಗಾರದ ಆಭರಣಗಳು (ಮೌಲ್ಯ ಸುಮಾರು ₹4.80 ಲಕ್ಷ) ಮತ್ತು ₹1.40 ಲಕ್ಷ ನಗದು ಸೇರಿ ಸುಮಾರು ₹6 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಿಚಾರಣೆಯಲ್ಲಿ ಕಳ್ಳರು ಕಳ್ಳತನದ ವಿಚಾರವನ್ನು ಒಪ್ಪಿಕೊಂಡಿದ್ದಾರೆ.
ಪೊಲೀಸರು ಆರೋಪಿಗಳಿಂದ ಚಾಣಾಕ್ಷತನದಿಂದ ವಿಚಾರಣೆ ನಡೆಸಿ ಕಳ್ಳತನಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ರೋಣ ಪೊಲೀಸ್ ಠಾಣೆಯ ಸಿಪಿಐ ವಿಜಯಕುಮಾರ ಮತ್ತು ನರೇಗಲ್ಲ ಪಿಎಸ್ಐ ಐಶ್ವರ್ಯ ನಾಗರಾಳ ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಎಸ್‌ಪಿ ರೋಹನ್ ಜಗದೀಶ್ ಮತ್ತು ಡಿಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗಿದೆ.
ಜಪ್ತಿಯಾದ ವಸ್ತುಗಳು:
4 ಬಂಗಾರದ ಬಳೆಗಳು (32.61 ಗ್ರಾಂ, ₹1.63 ಲಕ್ಷ).
ಬಂಗಾರದ ಮಾಂಗಲ್ಯ ಸರ (34.84 ಗ್ರಾಂ, ₹1.76 ಲಕ್ಷ).
ಕಳ್ಳತನದಿಂದ ಬಂದ ₹1.40 ಲಕ್ಷ ನಗದು.
ಈ ಯಶಸ್ವಿ ಕಾರ್ಯಾಚರಣೆಗೆ ಎಸ್‌ಪಿ ರೋಹನ್ ಜಗದೀಶ್ ಅವರು ಪೊಲೀಸ್ ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.


