ಬೆಂಗಳೂರು: ಒಳ ಮೀಸಲಾತಿಯನ್ನೂ ಪರಿಗಣಿಸಿ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡಬೇಕು. ನ್ಯಾಯಾಲಯದ ಕುಂಟುನೆಪ ಕೊಡಬಾರದು. ಇಲ್ಲವಾದರೆ ಬಿಜೆಪಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾದೀತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಮೀಸಲಾತಿ ಪ್ರಮಾಣವನ್ನು ಶೇ 50ರಿಂದ ಶೇ 56ಕ್ಕೆ ಏರಿಸಿದ್ದಾರೆ. ನೀವು 50 ಸಾವಿರ ಖಾಲಿ ಹುದ್ದೆ ಭರ್ತಿ ಮಾಡುತ್ತೀರಾ, ಅಥವಾ 1 ಲಲಕ್ಷ ಹುದ್ದೆ ಭರ್ತಿ ಮಾಡುವಿರಾ ಎಂಬುದು ನಿಮಗೆ ಬಿಟ್ಟದ್ದು.
ಎಲ್ಲ ಖಾಲಿ ಹುದ್ದೆ ಭರ್ತಿ ಮಾಡಿ ಎಂಬ ಆಗ್ರಹ ನಮ್ಮದು. ಶೇ 56 ಒಳ ಮೀಸಲಾತಿ ನೀಡಿ ಬಿಜೆಪಿ ಸರಕಾರವು ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿದೆ. ಅದರ ಆಧಾರದಡಿ ಶೋಷಿತ- ಪೀಡಿತ ಸಮುದಾಯಗಳಿಗೆ ಒಳ ಮೀಸಲಾತಿ ಪರಿಗಣಿಸಿ ಈ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳೇ ಪದೇಪದೇ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದೀರಿ. ಪರಿಶಿಷ್ಟ ಜಾತಿ- ಪಂಗಡಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ರಾಜ್ಯ ನ್ಯಾಯಾಲಯದ ಕುಂಟುನೆಪ ಹೇಳದೇ ಈ ಸಮುದಾಯಗಳಿಗೆ ಉದ್ಯೋಗ ನೀಡಿ ನ್ಯಾಯ ಕೊಡಿ ಎಂದು ಒತ್ತಾಯಿಸಿದರು.
ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ- ಪಂಗಡಗಳ ಯುವಜನತೆ ಸೇರಿ ಎಲ್ಲ ವರ್ಗಗಳ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಿ. ಅದನ್ನು ಬಿಟ್ಟು ಈ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ತೊಟ್ಟಿಲು ತೂಗುವ ಜೊತೆಗೇ ಮಗುವನ್ನು ಚಿವುಟುವ ಕೆಲಸ ಮಾಡುತ್ತಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು. ಹಳೆಯ ಮೀಸಲಾತಿ ಪ್ರಮಾಣದಡಿ ನೇಮಕಾತಿ ಮಾಡಲು ಮುಂದಾಗಿರುವ ರಾಜ್ಯ ಸರಕಾರವು ರಾಜ್ಯದಲ್ಲಿ ಬೆಂಕಿ ಹಚ್ಚಲು ಹೊರಟಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.



