ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಇತರೆ ಇಲಾಖೆಗಳಿಂದ ಆಯೋಜಿಸಿದ ಗದಗ ಜಿಲ್ಲಾ ಉದ್ಯೋಗ ಮೇಳ-2025 ಪ್ರಭುತ್ವ ಉದ್ಯೋಗಾಕಾಂಕ್ಷಿಗಳಿಂದ ಭಾರೀ ಸ್ಪಂದನೆ ಕಂಡಿತು.
ಉದ್ಯೋಗ ಮೇಳಕ್ಕೆ ಆಫ್‌ಲೈನ್ ಹಾಗೂ ಆನ್‌ಲೈನ್ ಮೂಲಕ 6243 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಮೇಳದಲ್ಲಿ ಸಂದರ್ಶನಕ್ಕೆ ಹಾಜರಾದ 4089 ಅಭ್ಯರ್ಥಿಗಳ ಪೈಕಿ 827 ಅಭ್ಯರ್ಥಿಗಳು ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಸಂದರ್ಶನದಲ್ಲಿ 1067 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳ ಪೈಕಿ 12 ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾಗಲು ರವಿವಾರವೇ ಬೆಂಗಳೂರಿಗೆ ತೆರಳಿದ್ದು, ಈ ವಾಹನಕ್ಕೆ ಸಚಿವ ಎಚ್.ಕೆ. ಪಾಟೀಲ ಚಾಲನೆ ನೀಡಿದರು.
ಉದ್ಯೋಗ ಮೇಳಕ್ಕೆ ಗದಗ ಜಿಲ್ಲೆಯ ಯುವಕರು ಹಾಗೂ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಖಾಸಗಿ ಹಾಗೂ ಸರಕಾರಿ ಕಂಪನಿಗಳು ತಮ್ಮ ಉದ್ಯೋಗಾವಕಾಶಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದು, ಹಲವರು ತಕ್ಷಣವೇ ಉದ್ಯೋಗ ಪಡೆಯುವಂತಾಗಿದೆ.
ಹತ್ತಾರು ಕಂಪನಿಗಳು ಪಾಲ್ಗೊಂಡು ವಿವಿಧ ಕ್ಷೇತ್ರಗಳ ಉದ್ಯೋಗಗಳಿಗಾಗಿ ಸಂದರ್ಶನ ನಡೆಸಿದವು. ಆಕರ್ಷಕ ವೇತನ, ತರಬೇತಿ ಹಾಗೂ ಕರಿಯರ್ ಗ್ರೋಥ್ ಅವಕಾಶಗಳೊಂದಿಗೆ ಯುವ ಪ್ರತಿಭೆಗಳಿಗೆ ದಾರಿ ತೆರೆಯಲಾಯಿತು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಪಾಟೀಲ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ್ ಪೋತದಾರ, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಡಾ. ಮಲ್ಲೂರ ಬಸವರಾಜ್ ಸೇರಿದಂತೆ ಇತರರು ಇದ್ದರು.
ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು. ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹಾಗೂ ಜನಪ್ರತಿನಿಧಿಗಳು ಈ ಮೇಳ ಯಶಸ್ವಿಯಾಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದು, ಈ ರೀತಿಯ ಕಾರ್ಯಕ್ರಮಗಳನ್ನು ಮುಂದುವರೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.