ವಿಜಯಸಾಕ್ಷಿ ಸುದ್ದಿ, ನರಗುಂದ: ಬರಗಾಲವಿದೆಯೆಂದು ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗದು ಎಂಬ ಭಯಬೇಡ. ಏಪ್ರಿಲ್ 1ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭವಾಗುತ್ತಿದ್ದು, ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ. ಗ್ರಾಮೀಣ ಪ್ರದೇಶಗಳ ಕಡುಬಡವರಿಗೂ ಯೋಜನೆಯ ಸದುಪಯೋಗ ದೊರಕುವಂತಾಗಬೇಕು ಎಂದು ನರಗುಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಅಭಿಪ್ರಾಯಪಟ್ಟರು.
ನಗರದ ತಾ.ಪಂ ಸಭಾಭವನದಲ್ಲಿ ಗುರುವಾರ ನಡೆದ ಪಿಡಿಓ, ಕಾಯಕಬಂಧು ಹಾಗೂ ನರೇಗಾ ಸಿಬ್ಬಂದಿಗಳ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇದ್ದೂರಲ್ಲೇ ನರೇಗಾ ಕೆಲಸ ಕೊಡುತ್ತಿರುವುದು ಗ್ರಾಮೀಣ ಪ್ರದೇಶದ ಜನರ ಗುಳೇ ತಪ್ಪಿಸುವ ಕೆಲಸವಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸಿದೆ. ಯೋಜನೆಯಡಿ ವಾರ್ಷಿಕವಾಗಿ 100 ದಿನಗಳವರೆಗೆ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗುವಂತಾಗಬೇಕು. ಆ ಮೂಲಕ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ನರೇಗಾ ವರದಾನವಾಗಲಿದೆ. ತಾಲೂಕಿನ ಎಲ್ಲ ಗ್ರಾ.ಪಂಗಳ ಕಾಯಕ ಬಂಧುಗಳು ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸ ಮಾಡಬೇಕು ಎಂದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಮಾರುತಿ ಅಸುಂಡಿ ಮಾತನಾಡಿ, ನರೇಗಾ ಯೋಜನೆಯ ಕಾಮಗಾರಿಗಳಿಂದ ಶಾಲೆಯ ಮೂಲಸೌಕರ್ಯಗಳ ನಿರ್ಮಾಣಕ್ಕೆ ನೆರವಾಗಿದೆ ಎಂದು ಯೋಜನೆಯ ಕಾಮಗಾರಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ್ ಮಾತನಾಡಿ, ಪ್ರತಿವರ್ಷ ಬದಲಾವಣೆಯಾಗುವ ನಿಯಮಾವಳಿಗೆ ಅನುಗುಣವಾಗಿ ನರೇಗಾ ಕೆಲಸ ನಿರ್ವಹಿಸಲು ಕಾಯಕಬಂಧುಗಳಿಗೆ ತರಬೇತಿ ಅತ್ಯವಶ್ಯಕವಾಗಿದೆ. ನರೇಗಾ ಕೆಲಸದಲ್ಲಿ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಭಾಗವಹಿಸುವಂತಾಗಬೇಕು. ಕಾಯಕಬಂಧುಗಳು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರನ್ನು ಸಂಪರ್ಕಿಸಿ ನರೇಗಾ ಯೋಜನೆಯಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಶ್ರಮವಹಿಸಬೇಕೆಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸುರೇಶ ಬಾಳಿಕಾಯಿ ಕಾಯಕಬಂಧುಗಳ ಪಾತ್ರ ಮತ್ತು ಜವಾಬ್ದಾರಿ ಕುರಿತು ತರಬೇತಿ ನೀಡಿದರು. ಬೇಸಿಗೆ ಅವಧಿಯಲ್ಲಿ ರೈತರ ಹೊಲದಲ್ಲಿ ಯೋಜನೆಯಡಿ ನಿರ್ಮಿಸುವ ಕಂದಕಬದುಗಳ ನಿರ್ಮಾಣ ಮತ್ತು ಅನುಷ್ಠಾನ ಕುರಿತು ತಾಂತ್ರಿಕ ಸಂಯೋಜಕ ಹನಮಂತ ಡಂಬಳ ವಿಷಯ ಮಂಡಿಸಿದರು. ಕೂಲಿಕಾರರ ಹಾಜರಾತಿ ನಿರ್ವಹಣೆ ಕುರಿತು ಎಂಐಎಸ್ ಸಂಯೋಜಕ ಮಹೇಶ ಚಿತ್ತವಾಡಗಿ ವಿಷಯ ಮಂಡಿಸಿದರು.
ತರಬೇತಿಯಲ್ಲಿ ನರಗುಂದ ತಾಲೂಕಿನ 13 ಗ್ರಾ.ಪಂಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಿಬ್ಬಂದಿ ವರ್ಗದವರು ಹಾಜರಿದ್ದರು.
ನರಗುಂದ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ವ್ಹಿ. ಕೊಣ್ಣೂರು, ಕಾಯಕಬಂಧುಗಳಿಗೆ ಬೇಸಿಗೆಯ ಬಿಸಿಲಿನ ತಾಪವನ್ನು ಎದುರಿಸಿ ಕೆಲಸ ನಿರ್ವಹಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಒದಗಿಸಿದರು. ನರೇಗಾ ಕೂಲಿಕಾರರು ತೆಳುವಾದ ಬಿಳಿಬಣ್ಣದ ನೂಲಿನ ಬಟ್ಟೆಯನ್ನು ತೊಟ್ಟು ಕೆಲಸ ಮಾಡುವಂತೆ ತಿಳಿಸಿದರು. ಅಲ್ಲದೆ ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯಗಳನ್ನು ಕುಡಿಯದೇ ಮನೆಯಲ್ಲಿ ಸಿದ್ಧಪಡಿಸಿದ ಮಜ್ಜಿಗೆ, ಪಾನಕದಂತಹ ಪಾನೀಯಗಳನ್ನು ಹೆಚ್ಚಾಗಿ ಸೇವಿಸಬೇಕೆಂದು ತಿಳಿಸಿದರು.