ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ (ಎಒಬಿ ಅಚಿಡಿಜ್)ಗಳಿಗೆ ಎನ್‌ಎಂಎಎಸ್ ಆ್ಯಪ್ ಮೂಲಕ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದ್ದು, ಸಮರೋಪಾದಿಯಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಿದರು.
ಗದಗ ತಾಲ್ಲೂಕು ಪಂಚಾಯಿತಿ ಬುಧವಾರ ಗೂಗಲ್ ಮೀಟ್ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 27 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 52,022 ಸಕ್ರಿಯ ಉದ್ಯೋಗ ಚೀಟಿಗಳಿವೆ. ಸದ್ಯ ಸಕ್ರಿಯ ಉದ್ಯೋಗ ಚೀಟಿಗಳಿಗೆ ಇ-ಕೆವೈಸಿ ಮಾಡುವಂತೆ ಆಯುಕ್ತಾಲಯದಿಂದ ಆದೇಶ ಬಂದಿದೆ. ಅದರಂತೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ಜೊತೆಗೆ ಇ-ಕೆವೈಸಿ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ, ಸಕ್ರಿಯ ಜಾಬ್‌ಕಾರ್ಡ್‌ಗಳಿಗೆ ಇ-ಕೆವೈಸಿ ಮಾಡಿಸುವಂತೆ ಸೂಚಿಸಿದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಉದ್ಯೋಗ ಖಾತ್ರಿ ಇಲಾಖೆ) ಕುಮಾರ ಪೂಜಾರರು ಮಾತನಾಡಿ, ಗದಗ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಗ್ರಾಮ ಪಂಚಾಯಿತಿಗಳು ಗದಗ ತಾಲೂಕು ವ್ಯಾಪ್ತಿಯಲ್ಲಿ ಬರುತ್ತವೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸಕ್ರಿಯ ಉದ್ಯೋಗ ಚೀಟಿಗಳು ಗದಗ ತಾಲ್ಲೂಕಿನಲ್ಲಿವೆ. ಗ್ರಾಮ ಪಂಚಾಯಿತಿಯ ಗ್ರಾಮ ಕಾರ್ಯ ಮಿತ್ರರು, ಬಿಎಫ್‌ಟಿ, ಡಿಇಒ ಮತ್ತು ಕಾರ್ಯ ಬಂಧುಗಳನ್ನು ಸಕ್ರಿಯವಾಗಿ ಇ-ಕೆವೈಸಿ ಕಾರ್ಯದಲ್ಲಿ ತೊಡಗಿಸಿಕೊಂಡು ಪೂರ್ಣಗೊಳಿಸುವಂತೆ ತಿಳಿಸಿದ್ದಾರೆ.



