ಕನ್ನಡ ಚಿತ್ರರಂಗ ತನ್ನ ಸರಳ ಮತ್ತು ಮಿತಭಾಷಿ ನಿರ್ದೇಶಕನನ್ನು ಕಳೆದುಕೊಂಡಿದೆ. ಹಿರಿಯ ನಿರ್ದೇಶಕ ಹಾಗೂ ನಟ ಜೋ ಸೈಮನ್ ಫೆಬ್ರವರಿ 13ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಫಿಲಂ ಚೇಂಬರ್‌ನಲ್ಲಿ ನಡೆದ ಕಾರ್ಯಕಾರಿ ಸಭೆಯ ವೇಳೆ ಅವರಿಗೆ ಹೃದಯಾಘಾತ ಉಂಟಾಯಿತು.
ಸುದ್ದಿಗೆ ಹಪಹಪಿಸದೆ, ಮೌನವಾಗಿ ಕೆಲಸ ಮಾಡುತ್ತಿದ್ದ ಜೋ ಸೈಮನ್, ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರವಾದರೂ ಮಾನ್ಯತೆ ವಿಚಾರದಲ್ಲಿ ಒಂದಿಷ್ಟು ಬೇಸರ ಹೊಂದಿದ್ದರು. ಕೆಲ ವಾರಗಳ ಹಿಂದಷ್ಟೇ ನೀಡಿದ ಸಂದರ್ಶನದಲ್ಲಿ ಅವರು ಈ ಮನದಾಳದ ಮಾತು ಹಂಚಿಕೊಂಡಿದ್ದರು.
ರಾಜ್ಯೋತ್ಸವ ಪ್ರಶಸ್ತಿಗೆ ಹಲವು ಬಾರಿ ಹೆಸರು ಶಿಫಾರಸು ಆಗಿದ್ದರೂ ಪ್ರಶಸ್ತಿ ಸಿಗದಿರುವುದು ಅವರಿಗೆ ನೋವು ತಂದಿತ್ತು. ಕಣಗಾಲ್ ಪ್ರಶಸ್ತಿಗೂ ಅರ್ಜಿ ಹಾಕಿದ್ದರೂ ಪರಿಗಣಿಸಲಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಪತ್ನಿಯ ಮಾತು ಕೇಳಿ “ಜನರ ಪ್ರೀತಿ ಇದ್ದರೆ ಸಾಕು” ಎಂದು ಪ್ರಶಸ್ತಿ ಅರ್ಜಿಗಳನ್ನು ನಿಲ್ಲಿಸಿದ್ದರಂತೆ.
ಸರಳ ಬದುಕು ನಡೆಸುತ್ತಿದ್ದ ಅವರು ಯಾವುದೇ ಹಂಗಿಲ್ಲದೆ ಜೀವನ ಸಾಗಿಸುತ್ತಿದ್ದರು. ಪರಿಚಯ ಫಲಕ ಇಲ್ಲ, ವಿಸಿಟಿಂಗ್ ಕಾರ್ಡ್ ಇಲ್ಲ – ಇದು ಅವರ ವೈಖರಿ. ಸಮಚಿತ್ತದಿಂದ ಬದುಕುವುದು ಅವರ ಜೀವನದ ತತ್ವವಾಗಿತ್ತು.
ಫೆಬ್ರವರಿ 14ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಕನ್ನಡ ಚಿತ್ರರಂಗದ ಈ ಸರಳ ಸಾಧಕ ಇನ್ನು ನೆನಪುಗಳಲ್ಲಿ ಮಾತ್ರ ಉಳಿದಿದ್ದಾರೆ.



