ವಿಜಯಸಾಕ್ಷಿ ಸುದ್ದಿ, ಗದಗ: ನಾವು ಮಾಡುವ ಕೆಲಸ ಕಾರ್ಯಗಳು ಜನಮೆಚ್ಚುಗೆ ಪಡೆಯುವಂತಿರಬೇಕು. ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಕೈಜೋಡಿಸುವ ಸದಾವಕಾಶಕ್ಕೆ ಎಲ್ಲರೂ ಒಂದಾಗಿ ಮುಂದಾಗಿ ಬಂದಾಗ ಸರ್ಕಾರಿ ಶಾಲೆಗಳ ಸಬಲೀಕರಣವು ಯಶಸ್ವಿಯಾಗುವುದು ಎಂದು ಗದುಗಿನ ಯುವ ವೈದ್ಯ ಡಾ. ಮಹಾಂತೇಶ ಸಜ್ಜನರ ಹೇಳಿದರು.
ಅವರು ಗದುಗಿನ ಸರ್ಕಾರಿ ಉರ್ದು ಶಾಲೆ ನಂ.4ರಲ್ಲಿ ಜಯೆಂಟ್ಸ್ ಗ್ರೂಪ್ಸ್ ಆಫ್ ಸಖಿ ಸಹೇಲಿ ಸಂಘಟನೆಯಿಂದ ಜರುಗಿದ ದಾನಿಗಳು ವಿದ್ಯಾರ್ಥಿಗಳಿಗೆ ಕೊಡಮಾಡಿದ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಯ ಮಕ್ಕಳು ಜೀವನದ ಅನುಭವವನ್ನು ಓದಿ-ತಿಳಿದು ಅರಿತುಕೊಂಡವರು. ಇಲ್ಲಿ ಕಲಿಕೆಯೊಂದಿಗೆ ಜೀವನದ ಸುಗಮ ಮಾರ್ಗಗಳನ್ನು ಮಕ್ಕಳಿಗೆ ತಿಳಿಸಲಾಗುತ್ತದೆ. ಅನುಭವದೊಂದಿಗೆ ಅರಿತ ಮಕ್ಕಳು ಬದುಕಿನಲ್ಲಿ ಗಟ್ಟಿತನವನ್ನು ಕಂಡುಕೊಳ್ಳುತ್ತಾರೆ. ಇಂದು ವಿವಿಧ ಹುದ್ದೆಗಳಲ್ಲಿ ಮುಖ್ಯ ಅಧಿಕಾರಿಗಳಾಗಿರುವವರು ಹೆಚ್ಚಾಗಿ ಸರ್ಕಾರಿ ಶಾಲೆಯಲ್ಲಿ ಓದಿದವರು. ಬದುಕನ್ನು ನಾವು ಹೇಗೆ ನಿಭಾಯಿಸಬೇಕು. ನಮ್ಮ ಜೀವನದ ಗುರಿ ಏನು ಎಂಬುದನ್ನು ಇಲ್ಲಿ ನಾವು ಕಂಡುಕೊಳ್ಳುತ್ತೇವೆ. ನಾನೂ ಕಲಿತದ್ದು ಸರ್ಕಾರಿ ಶಾಲೆಯಲ್ಲಿಯೇ ಎಂಬ ಹೆಮ್ಮೆ ನನಗಿದೆ. ಇಂತಹ ಮಕ್ಕಳಿಗೆ ಸಹಾಯ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸುದೈವ ಎಂದರು.
ಜಯೆಂಟ್ಸ್ ಗ್ರೂಪ್ಸ್ ಆಫ್ ಸಖಿ ಸಹೇಲಿ ಸಂಘಟನೆಯ ಅಧ್ಯಕ್ಷೆ ಸುಮಾ ಪಾಟೀಲ ಮಾತನಾಡಿ, ಸಂಘ-ಸಂಸ್ಥೆಗಳು ಮತ್ತು ದಾನಿಗಳು ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಚಿಂತನೆಗೆ ಅಡಿ ಇಟ್ಟಿರುವುದು ಆರೋಗ್ಯಕರ ಬೆಳವಣಿಗೆ. ಮೇಲಿಂದ ಮೇಲೆ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಅವಶ್ಯಕತೆಗಳನ್ನು ಪೂರೈಸುವ ಕಾರ್ಯ ನಿರಂತರವಾಗಿದ್ದಾಗ ಸಬಲೀಕರಣ ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ, ಸಂಘಟನೆಯ ಪದಾಧಿಕಾರಿಗಳಾದ ರೇಖಾ ರೊಟ್ಟಿ, ಅಶ್ವಿನಿ ಮಾದಗುಂಡಿ, ಚಂದ್ರಕಲಾ ಸ್ಥಾವರಮಠ, ಪದ್ಮಾ ಕಬಾಡಿ, ಅನುರಾಧಾ ಅಮಾತ್ಯಗೌಡರ ಸೇರಿದಂತೆ ಶಾಲಾ ಶಿಕ್ಷಕರಾದ ಎನ್.ಎಚ್. ಜಕ್ಕಲಿ, ಐ.ಎ. ಗಾಡಗೋಳಿ, ಎಚ್.ಬಿ. ಮಕಾನದಾರ, ಎಸ್.ಎಸ್. ಬಳ್ಳಾರಿ, ಬಸವಣ್ಣೆವ್ವ ಮುಳ್ಳಾಳ, ಸಾವಿತ್ರಿ ಪಿಳ್ಳೆ, ಗೀತಾ ಮಹಾಕಾಳಿಮಠ, ಅರುಣಾ ಬನ್ನಿಗೋಳ ಸೇರಿದಂತೆ ಪಾಲಕ-ಪೋಷಕರು ಉಪಸ್ಥಿತರಿದ್ದರು.
ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟೆಪ್ಪನವರ ಮಾತನಾಡಿ, ದಾನಿಗಳು ಸರ್ಕಾರಿ ಶಾಲೆಗಳಿಗೆ ಸ್ಫೂರ್ತಿಯಾಗಿದ್ದಾರೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಚಿಂತನೆ ಮಾಡಿ ಅವರ ಓದು-ಬರಹಕ್ಕೆ ಪೂರಕ ಸಾಮಗ್ರಿಗಳನ್ನು ನೀಡುವ ಮೂಲಕ ದಾನಿಗಳು ಶೈಕ್ಷಣಿಕ ಅಭಿವೃದ್ಧಿಗೆ ಬೆನ್ನೆಲುಬಾಗಿದ್ದಾರೆ ಎಂದರು.