ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲೆಯ ರೆಡ್ ರಿಬ್ಬನ್ ಕಾಲೇಜುಗಳು ಮತ್ತು ಜಿಲ್ಲೆಯ ಎಲ್ಲ ಶಿಕ್ಷಣ ಮಹಾವಿದ್ಯಾಲಯಗಳು, ಎಂ.ಬಿ. ಹುಯಿಲಗೋಳ ಶಿಕ್ಷಣ ಮಾಹಾವಿದಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಯುವ ದಿನ ಹಾಗೂ ತೀವ್ರತರ ಹೆಚ್.ಐ.ವಿ. ಅರಿವಿನ ಮಾಸಾಚರಣೆ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಸಮಾರಂಭ ಉದ್ಘಾಟಿಸಿದ ಡ್ಯಾಪ್ಕ್ಯೂ ಅಧಿಕಾರಿ ಡಾ. ಅರುಂಧತಿ ಕೆ ಮಾತನಾಡಿ, ಯೌವನವನ್ನು ಸದುಪಯೋಗಪಡಿಸಿಕೊಳ್ಳಲು ಮಾನಸಿಕ, ದೈಹಿಕ, ಸಾಮಾಜಿಕ ಆರೋಗ್ಯದ ಹಿತಕ್ಕಾಗಿ ಸಮಾಜದಲ್ಲಿ ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕು. ಈ ವರ್ಷದ ಘೋಷಣೆ `ಸುಸ್ಥಿರ ಅಭಿವೃದ್ಧಿಗಾಗಿ ಸ್ಥಳೀಯ ಯುವ ಜನರ ಪಾತ್ರ ಹಾಗೂ ಗುರಿಗಳು’ ಅನುಸಾರ ಇಂದಿನ ಯುವಕರು ಸದೃಢ ಆರೋಗ್ಯವನ್ನು ಹೊಂದಿ, ದೇಶದ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸಬೇಕೆಂದು ತಿಳಿಸಿದರು.
ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಿ.ಬಿ. ಲಾಳಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತಾರಾಷ್ಟ್ರೀಯ ಯುವ ದಿನಾಚರಣೆಯ ಮಹತ್ವವನ್ನು ತಿಳಿಸುತ್ತಾ, ಇಂದಿನ ಯುಗದಲ್ಲಿ ಯುವಕರು ಆರೋಗ್ಯದ ಅರಿವವನ್ನು ಮೂಡಿಸಿ, ಶಿಕ್ಷಣವನ್ನು ಪರಿವರ್ತಿಸುವುದು. ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಶಿಕ್ಷಣವನ್ನು ಹೆಚ್ಚು ಪ್ರಸ್ತುತ, ನ್ಯಾಯ ಸಮ್ಮತವಾಗಿಸುವ ನಿಟ್ಟಿನಲ್ಲಿ ಯುವಜನರ ಪಾತ್ರ ಮುಖ್ಯವಾಗಿವೆ. ರೋಗಿಯ ಜೀವ ಉಳಿಸಲು ವೈದ್ಯರಾಗಬೇಕಿಲ್ಲ, ರಕ್ತದಾನ ಮಾಡಿದರೆ ಸಾಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಗಂಗೂಬಾಯಿ ಪವಾರ ಅಧ್ಯಕ್ಷೀಯ ನುಡಿಗಳನ್ನಾಡಿ, ಇಂದಿನ ಯುವಕರು ದುಶ್ಚಟಗಳಿಂದ ದೂರವಿದ್ದು, ಯೌವನವನ್ನು ಜೋಪಾನ ಮಾಡಿಕೊಳ್ಳಬೇಕು. ಇಲಾಖೆಯ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ಸಾಮಾಜಿಕ ಸೇವೆಗೆ ಮುಂದಾಗಬೇಕೆಂದು ಹೇಳಿದರು.
ಸಮಾರಂಭದಲ್ಲಿ ಪ್ರೊ. ವಿ.ಪಿ. ಪಾಟೀಲ, ಪ್ರೊ. ಎನ್.ಜಿ. ಚನ್ನಪ್ಪಗೌಡರ, ಪ್ರೊ. ವಿ.ಬಿ. ತಾಳಿ, ಪ್ರೊ. ಎಸ್.ವಾಯ್. ಕಠಾರೆ, ಪ್ರೊ. ಎಲ್.ಎಸ್. ಹೊಸಳ್ಳಿ, ಸಂತೋಷ ಬಡಿಗೇರ, ಕಾಲೇಜಿನ ಸಿಬ್ಬಂದಿಗಳು ಹಾಗೂ ಆರೋಗ್ಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಹಜರತ್ಬೀ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಹನಾ ಜಂಬಗಿ ಸ್ವಾಗತಿಸಿದರು. ಆಫ್ರೀನ್ ಹಾಗೂ ರವಿಚಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರ ಶ್ರೀಕಾಂತ ಕರಡಿ ವಂದಿಸಿದರು.
ಇಂದಿನ ಯುವ ಜನಾಂಗದಲ್ಲಿ ಸಾಮಾಜಿಕ ಮೌಲ್ಯಗಳು ಕಡಿಮೆಯಾಗಿದ್ದು, ಗುರು-ಹಿರಿಯರು, ತಂದೆ-ತಾಯಿ ಎನ್ನುವ ಗೌರವವಿಲ್ಲದೆ ಆಧುನಿಕ ಮಾಧ್ಯಮದ ಪ್ರಭಾವಕ್ಕೆ ಮಾರು ಹೋಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಶೇ.40ರಷ್ಟು ಇರುವ ಯುವಜನರು ತಮ್ಮ ಜವಾಬ್ದಾರಿಯನ್ನು ಅರಿತು ದೇಶದ ಒಳಿತಿಗೆ ಪೂರಕವಾದ ತೀರ್ಮಾಣವನ್ನು ಕೈಗೊಂಡು ಸದೃಢವಾದ ದೇಶ ಕಟ್ಟುವಲ್ಲಿ ಕೈ ಜೋಡಿಸಬೇಕೆಂದು ಡಾ. ಅರುಂಧತಿ ಕೆ ತಿಳಿಸಿದರು.



