ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ; ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವುದೇ ಲೋಪಗಳಾಗದಂತೆ ಪರೀಕ್ಷೆಯು ಸುಗಮ, ಸುರಕ್ಷಿತ, ವ್ಯವಸ್ಥಿತ, ನಕಲುಮುಕ್ತವಾಗಿ ಜರುಗುವಂತೆ ಎಲ್ಲ ರೀತಿಯ ಪೂರ್ವ ಸಿದ್ಧತೆ, ಮುಂಜಾಗೃತಾ ಕ್ರಮಗಳನ್ನು ಪರೀಕ್ಷಾ ಉಸ್ತುವಾರಿಗಳು ತೆಗೆದುಕೊಳ್ಳಬೇಕು ಮತ್ತು ಎಲ್ಲ ಇಲಾಖೆಯ ಅಧಿಕಾರಿಗಳು ಕೈಜೋಡಿಸಬೇಕು ಎಂದು ತಹಸೀಲ್ದಾರ ವಾಸುದೇವ ಎಂ.ಸ್ವಾಮಿ ಹೇಳಿದರು.
ಅವರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಗುರುವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಯಾವುದೇ ಅಡೆತಡೆ ಇಲ್ಲದೆ ಸುಸೂತ್ರವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿ ಕೆಲಸ ಮಾಡುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯವ ಕೇಂದ್ರದ ಹತ್ತಿರ ಬಸ್ ನಿಲುಗಡೆ ಮಾಡುವ ಮೂಲಕ ಹೆಚ್ಚಿನ ಅನುಕೂಲ ಮಾಡಿಕೊಡುವುದು ಸೇರಿ ಶೌಚಾಲಯ, ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ ಇತ್ಯಾದಿ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಆರೋಗ್ಯ, ಸಾರಿಗೆ, ಹೆಸ್ಕಾಂ, ಗ್ರಾಪಂ ಎಲ್ಲ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ತಾ.ಪಂ ಇಓ ಕೃಷ್ಣಪ್ಪ ಧರ್ಮರ ಮಾತನಾಡಿ, ಆಯಾ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ, ಗ್ರಾಮೀಣ ಭಾಗದಲ್ಲಿರುವ ಕೇಂದ್ರಗಳಿಗೆ ಬಸ್ ಸೌಲಭ್ಯ ದೊರಕಿಸಲು ಇಲಾಖೆಗೆ ತಿಳಿಸಲಾಗಿದೆ. ಬಸ್ ನಿಲ್ದಾಣದಿಂದ ಪರೀಕ್ಷಾ ಕೇಂದ್ರ ದೂರವಿದ್ದರೆ ಪಂಚಾಯಿತಿಯಿಂದ ವಾಹನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿರುವದರಿಂದ ಯಾರೂ ನಿಷ್ಕಾಳಜಿ ವಹಿಸುವಂತಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಅಧೀಕ್ಷಕರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಶಿಕ್ಷಣ ಸಂಯೋಜಕ ಉಮೇಶ ಹುಚ್ಚಯ್ಯನಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಕೆಪಿಟಿಸಿಎಲ್‌ನ ಆಂಜನೇಯಪ್ಪ ಬಿ, ಸಿಡಿಪಿಓ ಮೃತ್ಯುಂಜಯ ಜಿ, ಆರೋಗ್ಯ ಇಲಾಖೆಯ ಬಿ.ಎಸ್. ಹಿರೇಮಠ, ಪೊಲೀಸ್ ಇಲಾಖೆಯ ಎಎಸ್‌ಐ ವೈ.ಸಿ. ದೊಡ್ಡಮನಿ, ಸಿಆರ್‌ಸಿಗಳಾದ ಉಮೇಶ ನೇಕಾರ, ಸತೀಶ ಬೋಮಲೆ, ಜಯಶ್ರೀ ಕೋಲಕಾರ, ಎಸ್.ವಿ. ಪತ್ತಾರ, ಜೆ.ಡಿ. ಲಮಾಣಿ, ಕೆ.ವೈ. ಮೇಲಿನಮನಿ, ಸಿ.ಬಿ. ಮೊಗಲಿ, ಎಸ್.ವೈ. ಪಾಟೀಲ, ಜೆ.ಎಸ್. ಹಿರೇಮಠ, ಬಿ.ಎನ್. ಗಾಯಕವಾಡ, ಎಸ್.ಎಚ್. ಪೂಜಾರ, ಕೆ. ರವಿ ಸೇರಿದಂತೆ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಜರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ್ ಮಾತನಾಡಿ ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟು 6 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 1,630 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಯಾವುದೇ ಸಮಸ್ಯೆ ಆಗದಂತೆ ಪರೀಕ್ಷೆಗಳನ್ನು ನಡೆಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ರೀತಿಯ ಭಯ ಇಲ್ಲದೆ ಪರೀಕ್ಷೆ ಬರೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಗಾಳಿ, ಬೆಳಕು, ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.