ಕಸಮುಕ್ತ ಗ್ರಾಮವಾಗಿಸಲು ಕೈಜೋಡಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: 79ನೇ ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸ್ವಚ್ಛತೆಯೊಂದಿಗೆ ಸ್ವಾತಂತ್ರ‍್ಯ ದಿನಾಚರಣೆ ಅಭಿಯಾನ ನಡೆಸಲಾಗುತ್ತಿದೆ. ತಾಲೂಕಿನ ಸೂಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗುರುವಾರ ಖುದ್ದಾಗಿ ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ ಕಂದಕೂರು ಮತ್ತು ಎಡಿ ಬಸವರಾಜ ಬಡಿಗೇರ ಕಸದ ವಾಹನ ಚಾಲನೆ ಮಾಡಿ ಸೂಡಿ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದ್ದಷ್ಟೇ ಅಲ್ಲದೆ ಮನೆಗಳಿಂದ ಸ್ವತಃ ಒಣ ಕಸ ಮತ್ತು ಹಸಿ ಕಸ ಪ್ರತ್ಯೇಕಿಸಿ ಕಸದ ವಾಹನಕ್ಕೆ ಹಾಕುವುದರ ಮೂಲಕ ಸೂಡಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಜಂಟಿಯಾಗಿ ಸ್ವಾತಂತ್ರ‍್ಯ ದಿನಾಚರಣೆಯ ಮಹತ್ವ ಸಾರುವ ಮೂಲಕ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಮೂಡಿಸಿದರು.

Advertisement

ಸೂಡಿ ಗ್ರಾಮದ ವಿದ್ಯಾನಗರ, ಶೆಟ್ಟರ ಕಾಲೋನಿ, ಬಜಾರ್ ಮುಖ್ಯ ರಸ್ತೆ, ಬಡಿಕಟ್ಟೆ ಓಣಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸ್ವಾತಂತ್ರ‍್ಯ ದಿನಾಚರಣೆ ಸಂದೇಶ ಸಾರುವುದರೊಂದಿಗೆ ಸ್ವಚ್ಛತೆಗಾಗಿ ಗ್ರಾ.ಪಂ ಸಿಬ್ಬಂದಿಗಳೊಂದಿಗೆ ಕೈಜೋಡಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು. ಮನೆಯ ಗೃಹಿಣಿಯರನ್ನು ಭೇಟಿಯಾಗಿ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸಿ ಕಸದ ವಾಹನದಲ್ಲೇ ಕಸ ಹಾಕಿ ಎಂದು ಮನವಿ ಮಾಡಿಕೊಂಡರು. ಅಲ್ಲದೇ ಗ್ರಾಮದ ಕಿರಾಣಿ ಅಂಗಡಿ ಮಾಲೀಕರನ್ನು ಭೇಟಿಯಾಗಿ ಗುಟ್ಕಾ, ದಿನಸಿ ಸಾಮಾಗ್ರಿಗಳ ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸದ ಬುಟ್ಟಿಯಲ್ಲಿ ಸಂಗ್ರಹಿಸಿ ಕಸದ ವಾಹನ ಬಂದಾಗ ಹಾಕಿ ಎಂದು ತಿಳುವಳಿಕೆ ಮೂಡಿಸಿದರು.

ಆಗಸ್ಟ್ 8ರಿಂದ 15ರವರೆಗೆ ನಡೆಯುತ್ತಿರುವ ಈ ಅಭಿಯಾನದಡಿ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯ ನಡೆಯುತ್ತಿದೆ. ಅದರಂತೆ ಸೂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಇಒ ಕಂದಕೂರ, ಆರೋಗ್ಯ ಕೇಂದ್ರದ ವಾತಾವರಣವನ್ನು ಪರಿಶೀಲಿಸಿದರು. ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಸ್ಪತ್ರೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಿದರು. ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ನೀರಿನ ಟ್ಯಾಂಕ್ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಸೂಡಿ ಗ್ರಾ.ಪಂ ಪಿಡಿಒ ಅಶೋಕ್ ಕಂಬಿ, ಗ್ರಾ.ಪಂ ಅಧ್ಯಕ್ಷೆ ಆಶಾಬೇಗಂ ಮೂಕಾಶಿ, ಸದಸ್ಯರಾದ ರೇಣುಕಾ ಹರಮನಿ, ಶಾಂತವ್ವ ಕದುರಿಕೋಟೆ, ಕೆ.ಶರಣಬಸವ, ರುದ್ರಪ್ಪ ಮಾರನಬಸರಿ, ಚೆನ್ನಪ್ಪ ನೂಲ್ವಿ, ಎನ್.ಆರ್.ಎಲ್.ಎಂ ಸಿಬ್ಬಂದಿ ವರ್ಗ ಹಾಗೂ ಸೂಡಿ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here