ವಿಜಯಸಾಕ್ಷಿ ಸುದ್ದಿ, ಗದಗ : ಮತದಾನ ಎಂಬುದು ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯೆಯಾಗಿದೆ. ಈ ಜನಪ್ರತಿನಿಧಿಗಳು ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಾ, ಜನರ ಒಳಿತಿಗಾಗಿ ಕಾನೂನುಗಳು ಮತ್ತು ಉಪಕ್ರಮಗಳನ್ನು ರೂಪಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತಾರೆ.
ನೀವು ಜವಾಬ್ದಾರಿಯುತ ನಾಗರಿಕರಾಗಲು ಬಯಸಿದರೆ ಯಾವುದೇ ಚುನಾವಣೆಯ ಸಮಯದಲ್ಲಿ ನಿಮ್ಮ ಮತವನ್ನು ಚಲಾಯಿಸುವುದು ನಿಮ್ಮ ಕರ್ತವ್ಯವಾಗಿದೆ ಎಂದು ಸನ್ಮಾರ್ಗ ಪದವಿಪೂರ್ವ ಕಾಲೇಜಿನ ಚೇರಮನ್ ರಾಜೇಶ ಕುಲಕರ್ಣಿ ಹೇಳಿದರು.
ಸನ್ಮಾರ್ಗ ಪ.ಪೂ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಮತದಾನ ಪಟ್ಟಿಯಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಹಾಗೂ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನಮ್ಮ ದೇಶ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಪ್ರಜಾಪ್ರಭುತ್ವದ ಮುಖ್ಯ ಆಶಯ ಜನರಿಂದ, ಜನರಿಗಾಗಿ ಮತ್ತು ಜನರಿಗೊಸ್ಕರ. ಸಾರ್ವಜನಿಕರು ಮತದಾನದಲ್ಲಿ ತಪ್ಪದೇ ಭಾಗವಹಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಮಹತ್ವದ ಕೊಡುಗೆಯನ್ನು ನೀಡಬೇಕು. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ನಡೆಸಲು ಚುನಾವಣಾ ಆಯೋಗದ ಜೊತೆಗೆ ಸಾರ್ವಜನಿಕರೂ ಕೈ ಜೋಡಿಸಬೇಕು.
ಯಾವುದೇ ಜಾತಿ, ಧರ್ಮ ಅಥವಾ ಆಮಿಷಗಳಿಗೆ ಒಳಗಾಗದೇ ನೈತಿಕ ಮತದಾನಕ್ಕೆ ಮುಂದಾಗುವ ಮೂಲಕ ಪ್ರಸ್ತುತ ಚುನಾವಣೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಚುನಾವಣಾಧಿಕಾರಿಗಳಾದ ಮನೋಜಕುಮಾರ ಮೀನಾ ತಿಳಿಸಿದ ಹಾಗೆ ರಾಜ್ಯದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಮತದಾರರಿಗೆ ಒದಗಿಸಿರುತ್ತಾರೆ.
ಆಯೋಗದ ವೆಬ್‌ಸೈಟ್‌ನಲ್ಲಿ ವಿಕಲಚೇತನರಗಾಲಿ ಕುರ್ಚಿ ಮತ್ತು ಕರೆದೊಯ್ಯುವ ಸೇವೆಗಳನ್ನು ಕಾಯ್ದರಿಸುವುದು ಇತ್ಯಾದಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು. KYC ಆ್ಯಪ್ ಅಭ್ಯರ್ಥಿಗಳ ಮಾಹಿತಿ, ಅಪರಾಧಗಳ ಹಿನ್ನೆಲೆ ಹಾಗೂ ಇತರೆ ವಿಷಯಗಳನ್ನು ತಿಳಿಯಲು ಬಳಸಬಹುದು. VOTER HELPLINE ಆ್ಯಪ್‌ನಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಿ ಎಂದರು.
ಭಾರತ ಚುನಾವಣಾ ಆಯೋಗವು ಚುನಾವಣೆ ಅಕ್ರಮ ತಡೆಗಟ್ಟಲು ಹಾಗೂ ಆಸೆ, ಆಮಿಷಗಳನ್ನು ಸ್ಥಳದಲ್ಲೇ ಚಿತ್ರೀಕರಿಸಲು ಸಿವಿಜಲ್ ಸಿಟಿಜನ್ ಆ್ಯಪ್ ಚಾಲನೆಗೊಳಿಸಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಪ್ಲೇಸ್ಟೋರ್‌ನಲ್ಲಿ CVIGIL Citigen App ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ವಿವರಗಳನ್ನು ನಮೂದಿಸಿ ನೊಂದಾಯಿಸಿಕೊಳ್ಳಬೇಕು. ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಫೋಟೋ, ವಿಡಿಯೋ ಮೂಲಕ ನೇರ ಸೆರೆ ಹಿಡಿದು ವಾಯ್ಸ್ ಮೂಲಕ ಕಳುಹಿಸಬಹುದು. ಇದು ನೇರವಾಗಿ ಚುನಾವಣಾಧಿಕಾರಿಗಳ ತಂಡಕ್ಕೆ ತಲುಪಲಿದೆ ಎಂದು ರಾಜೇಶ ಕುಲಕರ್ಣಿ ಮಾಹಿತಿ ನೀಡಿದರು.