ವಿಶ್ವಾಸದೊಂದಿಗೆ ದೇಶದ ಪ್ರಗತಿಗೆ ಕೈಜೋಡಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪರಿಶ್ರಮದಿಂದ ಯಶಸ್ಸು ಸಾಧ್ಯ. ಈ ನಿಟ್ಟಿನಲ್ಲಿ ಜಗತ್ತಿನಲ್ಲಿನ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧಕರನ್ನು ಆದರ್ಶವನ್ನಾಗಿಟ್ಟುಕೊಂಡು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬದಲಾಗುತ್ತಿರುವ ವಿದ್ಯಮಾನಗಳಲ್ಲಿ ಪ್ರಾವೀಣ್ಯತೆ ಮತ್ತು ಕೌಶಲ್ಯತೆಯನ್ನು ಮೆರೆಯಬೇಕು ಎಂದು ಬೆಂಗಳೂರಿನ ರಾಕ್ಟೆನ್ ಕಂಪನಿಯ ಮುಖ್ಯ ಇನ್ಫಾರ್ಮೇಶನ್ ಸೆಕ್ಯೂರಿಟಿ ಆಫೀಸರ್ ಪ್ರಸನ್ನಕುಮಾರ ಪಿ.ಕೆ ಹೇಳಿದರು.

Advertisement

ಅವರು ಶುಕ್ರವಾರ ಪಟ್ಟಣದ ಶ್ರೀಮತಿ ಕಮಲಾ ಶ್ರೀ ವೆಂಕಪ್ಪ ಎಂ.ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ಮಿಲಾಂಜೆ-2025 ತಾಂತ್ರಿಕ ಮತ್ತು ಸಾಂಸ್ಕೃತಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಹಾದಿಯಲ್ಲಿ ವಿಶ್ವಾಸ ಮತ್ತು ಸಕಾರಾತ್ಮಕ ಪ್ರಕ್ರಿಯೆಗಳನ್ನು ರೂಢಿಸಿಕೊಂಡು ತಾಂತ್ರಿಕತೆಯ ವಿಚಾರಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಸಮಾಜ ಮತ್ತು ದೇಶದ ಪ್ರಗತಿಗೆ ಮುಂದಾಗಬೇಕು. ಜಗತ್ತು ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಕಾಣುತ್ತಿದೆ. ಬದಲಾಗುತ್ತಿರುವ ಐಟಿ-ಬಿಟಿಯೊಂದಿಗೆ ವಿದ್ಯಾರ್ಥಿಗಳು ಹೊಂದಿಕೊಂಡು ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ಮಾತನಾಡಿ, ಇಂದಿನ ತಾಂತ್ರಿಕ ಮತ್ತು ಔದ್ಯೋಗಿಕ ಯುಗದಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಜೀವನದಲ್ಲಿ ಅವಕಾಶಗಳನ್ನು ಬಳಸಿಕೊಂಡು ಪರಿಶ್ರಮದಿಂದ, ಶ್ರದ್ಧೆಯಿಂದ ಆಯ್ದುಕೊಂಡ ಕ್ಷೇತ್ರದಲ್ಲಿ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳು ಪ್ರಯತ್ನದ ಜೊತೆಗೆ ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವೇದಿಕೆ ಮೇಲೆ ಕಾಲೇಜಿನ ಪ್ರೊ. ವಿಕ್ರಮ ಶಿರೋಳ, ಡಾ. ಗಿರೀಶ ಯತ್ತಿನಹಳ್ಳಿ, ಡಾ. ಅರುಣ ಚೋರಿ, ಪ್ರೊ. ಅಮರಪ್ಪ ಪಾಗಿ, ಪ್ರೊ. ಎಸ್.ಸಿ. ಕೆರಿಮನಿ ಉಪಸ್ಥಿತರಿದ್ದರು. ಶ್ರಿದೇವಿ ಗೌಡರ, ಅಮಿತ ಐರೋಡಗಿ, ಶ್ರೇಯಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅಗಡಿ ಕಾಲೇಜಿನ ಜತೆಗೆ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು ಮೀಲಾಂಜೆ-25ರಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

340 ವಿದ್ಯಾರ್ಥಿಗಳು ಪದವಿ ಪೂರೈಸಿರುವ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭವು ಮೇ. 24ರಂದು ನಡೆಯಲಿದೆ. ಗದಗ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸುರೇಶ ನಾಡಗೌಡರ ಆಗಮಿಸುವರು. ಹಳೆ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮಕ್ಕೆ ಬಿಫಿನ್ ಜುಗನಿಕರ್ ಅತಿಥಿಗಳಾಗಿ ಆಗಮಿಸಲಿದ್ದು, ಪಾಲಕರು, ಗಣ್ಯರು ಆಗಮಿಸಲಿದ್ದಾರೆ. ಎಂ.ಸಿ. ಬಿಜ್ಜು, ವಿನಯ ಮ್ಯೂಸಿಕ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


Spread the love

LEAVE A REPLY

Please enter your comment!
Please enter your name here