ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಗ್ರಾಮೀಣ ಪ್ರದೇಶಗಳು ಶುಚಿತ್ವದಿಂದ ಕೂಡಿದ್ದರೆ ಗ್ರಾಮದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಹರಡಲು ಸಾಧ್ಯವಾಗದು. ಗ್ರಾಮಕ್ಕೆ ರೋಗದ ಆಹ್ವಾನ ನೀಡುವವರು ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುತ್ತಾರೆ. ಗ್ರಾಮಕ್ಕೆ ಯಾವುದೇ ರೋಗ ಬರಬಾರದು ಎನ್ನುವವರು ಗ್ರಾ.ಪಂ ನೀಡುವ ಮಾರ್ಗದರ್ಶನದಂತೆ ಕಸ ವಿಲೇವಾರಿ ಮಾಡಿ ತಮ್ಮ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಇಡೀ ಗ್ರಾಮವೇ ಸ್ವಚ್ಛತೆಯಿಂದ ಕೂಡಿದ್ದರೆ ಗ್ರಾಮದ ಮಕ್ಕಳ ಭವಿಷ್ಯವು ಉಜ್ವಲವಾಗಿರುತ್ತದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ, ಕಂದಕೂರು ಜಾಗೃತಿ ಮೂಡಿಸಿದರು.
ಗುರುವಾರ ಬೆಳಂಬೆಳಿಗ್ಗೆ ಮಾರನಬಸರಿ ಗ್ರಾ.ಪಂ ಅಧ್ಯಕ್ಷ ವೀರಣ್ಣ ಮರಡಿ, ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ, ಪಿಡಿಒ ಎಸ್.ಆರ್. ಸಂಕನೂರ ಅವರ ಜೊತೆಗೂಡಿ ಮಾರನಬಸರಿ ಗ್ರಾಮದ ಹಳೆ ಪಂಚಾಯಿತಿ ಆವರಣ, ಬಸವೇಶ್ವರ ಓಣಿ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿದರು.
ಮನೆಯಲ್ಲಿ ಬಳಸಿ ಬೇಡವಾದ ಕಸವನ್ನು ಒಣ ಕಸ ಮತ್ತು ಹಸಿ ಕಸ ಎಂದು ಬೇರ್ಪಡಿಸಿ. ಒಣ ಕಸ ಮತ್ತು ಹಸಿ ಕಸ ಸಂಗ್ರಹಕ್ಕೆ ಗ್ರಾ.ಪಂ ವತಿಯಿಂದ ಪ್ರತ್ಯೇಕವಾಗಿ ಕಸದಬುಟ್ಟಿ ನೀಡಿದ್ದಾರೆ. ಸ್ವಚ್ಛತೆಗಾರರ ಮೂಲಕ ಕಸದವಾಹಿನಿಗೆ ಕಸ ಹಾಕಿ. ಮನೆ-ಗ್ರಾಮ ಕಸ ಮುಕ್ತವಾದರೆ ಗ್ರಾಮದ ವಾತಾವರಣ ಆರೋಗ್ಯಯುತವಾಗುತ್ತದೆ. ಇದಕ್ಕೆ ಮಾರನಬಸರಿ ಗ್ರಾ.ಪಂ ಸಿಬ್ಬಂದಿ ಶ್ರಮಿಸುತ್ತಿದ್ದು, ಗ್ರಾಮಸ್ಥರು ಕೂಡಾ ಕೈಜೋಡಿಸಿದಾಗ ಮಾತ್ರ ಗಾಂಧೀಜಿ ಕಂಡ ಗ್ರಾಮಗಳ ಅಭಿವೃದ್ಧಿ ಕನಸು ಕಾಣಲು ಸಾಧ್ಯ ಎಂದು ಗ್ರಾಮಸ್ಥರಲ್ಲಿ ತಿಳುವಳಿಕೆ ಮೂಡಿಸಿದರು.
ಕಿರಾಣಿ ಅಂಗಡಿ, ಹೋಟೆಲ್‌ಗಳಿಗೆ ತೆರಳಿ ಮಾಲೀಕರಲ್ಲಿ ಸ್ವಚ್ಛತೆಯ ಪಾಠ ಮಾಡಿದ ಇಒ ಚಂದ್ರಶೇಖರ ಕಂದಕೂರ, ಪ್ಲಾಸ್ಟಿಕ್ ಕವರ್‌ಗಳನ್ನು ಹೊರಗಡೆ ಬಿಸಾಡದೇ ಕಸದಬುಟ್ಟಿಯಲ್ಲಿ ಸಂಗ್ರಹಿಸಿ, ಅಂಗಡಿಗೆ ಬರುವ ಗ್ರಾಹಕರಲ್ಲಿ ಪ್ಲಾಸ್ಟಿಕ್ ಹಾಳೆ ತರದೆ ಪರಿಸರ ಸ್ನೇಹಿ ಕೈಚೀಲ ತಂದು ದಿನಸಿ ಖರೀದಿಸುವ ಬಗ್ಗೆ ತಿಳುವಳಿಕೆ ಮೂಡಿಸಿ ಎಂದರು.
ಈ ಸಂದರ್ಭದಲ್ಲಿ ಮಾರನಬಸರಿ ಗ್ರಾ.ಪಂನ ಉಪಾಧ್ಯಕ್ಷೆ ಮಂಜುಳಾ ಹಾದಿಮನಿ, ಸದಸ್ಯರಾದ ಶಿವಕುಮಾರ ದಿಂಡೂರು, ಅಲ್ಲಾಸಾಬ ಬೋತೇಖಾನ್, ವೀರಪ್ಪ ನಿಡಗುಂದಿ, ದಿಲ್ಷಾದ್ ದೋಟಿಹಾಳ್, ಫಾತೀಮಾ ಸವಡಿ, ಹನಮ್ಮಪ್ಪ ತಳವಾರ ಮತ್ತು ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಹಿಳಾ ಸಬಲೀಕರಣಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸ್ವಚ್ಛ ಭಾರತ್ ಮಿಶನ್ ಅಡಿ ಕಸ ವಿಲೇವಾರಿ ವಾಹನಕ್ಕೆ ಮಹಿಳಾ ಡ್ರೈವರಗಳನ್ನೇ ನೇಮಕ ಮಾಡಲಾಗಿದ್ದು, ಮಾರನಬಸರಿ ಕಸದ ವಾಹಿನಿ ಡ್ರೈವರ್ ಗೀತಾ ಹಾದಿಮನಿ ಅವರ ಜೊತೆ ಇಒ ಚಂದ್ರಶೇಖರ ಕಂದಕೂರ ಸಮಾಲೋಚನೆ ನಡೆಸಿ ಪ್ರಾಮಾಣಿಕವಾಗಿ ತಮ್ಮ ಕೆಲಸವನ್ನು ನಿರ್ವಹಿಸುವಂತೆ ಸೂಚಿಸಿದರು.