ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಆ ಜಮೀನಿನ ಮಾಲೀಕತ್ವ ಯಾರಿಗೆ ಸೇರಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಸರಕಾರ ಇ-ಪೌತಿ ಆಂದೋಲನವನ್ನು ಜಾರಿಗೊಳಿಸಿದೆ. ಈ ಆಂದೋಲನಕ್ಕೆ ರೈತರೆಲ್ಲರೂ ಕೈಜೋಡಿಸಿ, ಇದನ್ನು ಯಶಸ್ವಿ ಮಾಡುವುದರ ಜೊತೆಗೆ, ಮುಂದಿನ ವಾರಸಾವನ್ನು ಬೇಗನೆ ನಿರ್ಧರಿಸಿಕೊಳ್ಳಬೇಕೆಂದು ಉಪವಿಭಾಗಾಧಿಕಾರಿ ಗಂಗಪ್ಪ ಹೇಳಿದರು.
ಪಟ್ಟಣದ ಚಾವಡಿಯಲ್ಲಿ ಇ-ಪೌತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇ-ಪೌತಿ ಖಾತಾ ಬದಲಾವಣೆಗೆ ಅರ್ಹ ಅರ್ಜಿದಾರರು ಪಹಣಿ ಪತ್ರ, ವಂಶ ವೃಕ್ಷ, ಮೃತರ ಮರಣ ಪ್ರಮಾಣ ಪತ್ರ ಮತ್ತು ಎಲ್ಲಾ ವಾರಸುದಾರರ ಆಧಾರ್ ಕಾರ್ಡ್ಗಳನ್ನು ತರಬೇಕು. ಇದರಿಂದ ಇ-ಪೌತಿ ಖಾತಾ ಬದಲಾವಣೆಗೆ ಅನುಕೂಲವಾಗುತ್ತದೆ. ಅರ್ಜಿದಾರರು ಅರ್ಜಿಯ ಜೊತೆಗೆ ತಮ್ಮ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಬೇಕೆಂದು ಗಂಗಪ್ಪ ಹೇಳಿದರು.
ಇದು ಸರಕಾರ ಮತ್ತು ಕಂದಾಯ ಇಲಾಖೆಯ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ವಾರಸಾ ಪ್ರಕಾರ ಮಾಲೀಕರು ಮರಣ ಹೊಂದಿದ ನಂತರ ಉತ್ತರಾಧಿಕಾರಿಗೆ ಮಾಲೀಕತ್ವ ವರ್ಗಾವಣೆಯಾಗದಿದ್ದಲ್ಲಿ ಈ ಇ-ಪೌತಿ ಕ್ರಮ ಅನುಕೂಲವಾಗಲಿದೆ. ಗ್ರಾಮ ಆಡಳಿತಾಧಿಕಾರಿಗಳು ಮೊದಲು ಒಟಿಪಿಯನ್ನು ದೃಢೀಕರಿಸಿಕೊಂಡು ನಿಮ್ಮ ಖಾತಾ ಬದಲಾವಣೆಗೆ ಮುಂದಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಾಳಪ್ಪ ಸೋಮಗೊಂಡ, ರೈತ ಮುಖಂಡರು, ರೈತ ಬಂಧುಗಳು, ಗ್ರಾಮ ಲೆಕ್ಕಾಧಿಕಾರಿ ದಾವಲ ಇಟಗಿ ಉಪಸ್ಥಿತರಿದ್ದರು.



