ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಹಿನ್ನೆಲೆ, ಅಮೆರಿಕ ಜೊತೆಗಿನ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿರುವ ವಿಚಾರದಲ್ಲಿ ಉದ್ಭವಿಸಿರುವ ತೀವ್ರತೆ ನಡುವೆ ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ರಾಜಧಾನಿ ಟೆಹ್ರಾನ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುಮಾರು 30 ಗುರಿಗಳನ್ನು ಲಕ್ಷ್ಯವಿಟ್ಟು ಕ್ಷಿಪಣಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕ್ಷಿಪಣಿ ಮಳೆಗರೆದಿರುವುದರಿಂದ ನಗರದಲ್ಲಿ ಭಾರೀ ಸ್ಫೋಟಗಳ ಶಬ್ಧಗಳು ಕೇಳಿಬಂದಿವೆ. ದಟ್ಟ ಹೊಗೆ ಆಕಾಶಕ್ಕೇರಿದ ದೃಶ್ಯಗಳು ವರದಿಯಾಗಿವೆ.
ಇಸ್ರೇಲ್ ಅಧ್ಯಕ್ಷರ ಭವನ, ಗುಪ್ತಚರ ಸಂಸ್ಥೆ, ವಿಮಾನ ನಿಲ್ದಾಣ ಹಾಗೂ ಕೋಮ್ ನಗರ ಸೇರಿದಂತೆ ಹಲವು ಪ್ರಮುಖ ಕೇಂದ್ರಗಳು ಗುರಿಯಾಗಿವೆ ಎಂದು ತಿಳಿದುಬಂದಿದೆ.
ಕ್ಷಿಪಣಿ ದಾಳಿಗಳ ಹಿನ್ನೆಲೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರನ್ನು ಟೆಹ್ರಾನ್‌ನಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲ್ ಕಡೆಗೆ ಇರಾನ್ ಕ್ಷಿಪಣಿ ಹಾರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಎಚ್ಚರಿಸಲಾಗುತ್ತಿದೆ. ದೇಶದ ಪ್ರಮುಖ ಪ್ರದೇಶಗಳಲ್ಲಿ ವಾಯುದಾಳಿ ಸೈರನ್‌ಗಳ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯಿಂದ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದ್ದು, ಅಂತರರಾಷ್ಟ್ರೀಯ ಸಮುದಾಯದ ಗಮನ ಈ ಬೆಳವಣಿಗೆಯತ್ತ ಕೇಂದ್ರೀಕೃತವಾಗಿದೆ.



