ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ನರೇಗಲ್ಲ ಗದಗ ಜಿಲ್ಲೆಯ ಅತಿ ದೊಡ್ಡ ಹೋಬಳಿ ಕೇಂದ್ರ. ಇಲ್ಲೊಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಮೂರು ವರ್ಷಗಳ ಹಿಂದೆ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವೆಂದು ಮೇಲ್ದರ್ಜೆಗೇರಿಸಲಾಗಿದೆ. ಆದರೆ ಈ ಸಮುದಾಯ ಆರೋಗ್ಯ ಕೇಂದ್ರವೇ ಅನಾರೋಗ್ಯಕ್ಕೆ ಒಳಗಾಗಿದ್ದು, ಸುಂದರ ಕಟ್ಟಡವನ್ನು ನೋಡಿ ಯಾರಾದರೂ ಚಿಕಿತ್ಸೆಗೆಂದು ಒಳಕ್ಕೆ ಹೋದೀರಿ ಜೋಕೆ!
ಈ ಸಮುದಾಯ ಆರೋಗ್ಯ ಕೇಂದ್ರಕ್ಕೆಂದೆ ಹೊಸದಾದ ಕಟ್ಟಡವನ್ನು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಲಕರಣೆಗಳು, ಸಿಬ್ಬಂದಿಗಳು ಇಲ್ಲದಿರುವುದರಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಆಸ್ಪತ್ರೆ ಸಾರ್ವಜನಿಕರಿಗೆ ಯಾವುದಕ್ಕೂ ಉಪಯೋಗವಿಲ್ಲದಂತಾಗಿದೆ.
ಈ ಕೇಂದ್ರವು 30 ಹಾಸಿಗೆಗಳ ಕೇಂದ್ರವಾಗಿದ್ದು, ಇದರಲ್ಲಿ ಪ್ರಯೋಗಾಲಯ, ಕ್ಷ-ಕಿರಣ ವಿಭಾಗ, ಔಷಧ ಸಂಗ್ರಹಣಾ/ವಿತರಣಾ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ಪ್ರಸೂತಿ ವಿಭಾಗ ಹೀಗೆ ಅನೇಕ ವಿಭಾಗಗಳನ್ನು ಒಳಗೊಂಡಿದೆ. ಆದರೆ ಯಾವುದೇ ವಿಭಾಗಕ್ಕೆ ಬೇಕಾದ ಸಲಕರಣೆಗಳನ್ನು ಇನ್ನೂ ಪೂರೈಕೆ ಮಾಡಲಾಗಿಲ್ಲ.
ಕುರ್ಚಿ, ಕಾಟ್, ಬೆಡ್, ಟೇಬಲ್ ಸೇರಿದಂತೆ ಇತರೆ ಯಾವುದೇ ಸೌಲಭ್ಯಗಳು ಇಲ್ಲಿ ಇಲ್ಲದಿರುವುದರಿಂದ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ.
ಪಟ್ಟಣ ಸೇರಿದಂತೆ ಜಕ್ಕಲಿ, ಹಾಲಕೆರೆ, ಬೂದಿಹಾಳ, ಮಾರನಬಸರಿ, ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ ಗ್ರಾಮಗಳ ಸುಮಾರು 30 ಸಾವಿರ ಜನರ ಹಾಗೂ ಪಕ್ಕದ ಗದಗ ತಾಲೂಕಿನ ಕೋಟುಮಚಗಿ, ಯಲಬುರ್ಗಾ ತಾಲೂಕಿನ ಬಂಡಿಹಾಳ, ತೊಂಡಿಹಾಳ ಗ್ರಾಮಗಳ 100ರಿಂದ 200 ರೋಗಿಗಳು ನಿತ್ಯವೂ ಚಿಕಿತ್ಸೆಗಾಗಿ ಬರುತ್ತಾರೆ.
ಖಾಲಿ ಹುದ್ದೆಗಳು: ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ 31. ಇದರಲ್ಲಿ ಎಸ್‌ಎಂಓ(ಸಿನಿಯರ್ ಮೆಡಿಕಲ್ ಆಫೀಸರ್), ತಜ್ಞ ವೈದ್ಯರು 5, ಶುಶ್ರೂಷಕಿಯರು 6, ಆಂಬುಲೆನ್ಸ್ ವಾಹನ ಚಾಲಕರು ಇಬ್ಬರು, ಗ್ರುಪ್ ಡಿ 10, ನೇತ್ರಾಧಿಕಾರಿ, ಕ್ಷಕಿರಣ ತಂತ್ರಜ್ಞ, ಕ್ಷಕಿರಣ ಸಹಾಯಕ, ಪ್ರಯೋಗಾಲಯ ಸಹಾಯಕ, ಕಚೇರಿ ಅಧೀಕ್ಷಕರು, ಸೀನಿಯರ್ ಪುರುಷ ಹೆಲ್ತ್ ಎಜ್ಯುಕೇಟರ್, ಹುದ್ದೆಗಳು ಖಾಲಿ ಇವೆ. ಈಗ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸಂಖ್ಯೆ ಕೇವಲ 8. ಇಷ್ಟು ಜನ ಸಿಬ್ಬಂದಿಗೆ ನಿತ್ಯವೂ ಬರುವ ನೂರಾರು ರೋಗಿಗಳನ್ನು ನಿಯಂತ್ರಣ ಮಾಡಿ, ಸೂಕ್ತ ಚಿಕಿತ್ಸೆ ನೀಡುವುದೇ ಒಂದು ಸವಾಲಾಗಿದೆ.
ಆಸ್ಪತ್ರೆಗೆ ಭೌತಿಕ ಸೌಲಭ್ಯಗಳನ್ನು ಮಾತ್ರ ಕಲ್ಪಿಸಿದರೆ ಸಾಲದು. ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡು ಆಸ್ಪತ್ರೆಯ ಉದ್ಘಾಟನೆ ಮಾಡಿದ್ದರೆ ಸೂಕ್ತವೆನ್ನಿಸುತ್ತಿತ್ತು. ಉದ್ಘಾಟನೆಯಾದರೂ ಚಿಕಿತ್ಸೆಯ ಭಾಗ್ಯವಿಲ್ಲದ ಈ ಆಸ್ಪತ್ರೆಯನ್ನು ತೆಗೆದುಕೊಂಡು ಸಾರ್ವಜನಿಕರು ನಾವೇನು ಮಾಡುವುದು?
-ಶಿವಪುತ್ರಪ್ಪ ಸಂಗನಾಳ.
ನಿವೃತ್ತ ಸೈನಿಕರು.ನರೇಗಲ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಕಾಗುವ ಸಿಬ್ಬಂದಿ ನೇಮಕಾತಿಗೆ ಮಂಜೂರಿ ನೀಡಲು ಈಗಾಗಲೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಸ್ಪತ್ರೆಗೆ ಬೇಕಾಗುವ ಕಾಟ್, ಮತ್ತಿತರ ಸಲಕರಣೆಗಳ ಖರೀದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಕೇಂದ್ರದ ಸುತ್ತಲೂ ರಕ್ಷಣಾ ಗೋಡೆ ಕಟ್ಟಲು ಅಂದಾಜು 1 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಯನ್ನು ಜಿಲ್ಲಾ ಪಂಚಾಯತ್‌ಗೆ ಸಲ್ಲಿಸಲಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಈ ಎಲ್ಲ ಕಾರ್ಯಗಳು ಮಂಜೂರಿಯಾಗಿ ಸಮುದಾಯ ಕೇಂದ್ರವು ಸಾರ್ವಜನಿಕರ ಸೇವೆಗೆ ಅಣಿಗೊಳ್ಳಲಿದೆ.
-ಡಾ.ಶಿವಪ್ರಕಾಶ ನೀಲಗುಂದ.
ಜಿಲ್ಲಾ ವೈದ್ಯಾಧಿಕಾರಿ.