ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಗಳಿಗೂ ತಮ್ಮದೇ ಆದ ವೈಶಿಷ್ಟ್ಯಮಯ ಹಿನ್ನೆಲೆ ಇದೆ. ಕೆಲವು ಹಬ್ಬ-ಹರಿದಿನಗಳು ಮನರಂಜನೆಯ ಮೂಲಕ ಆಚರಿಸಲ್ಪಡುತ್ತಿದ್ದರೆ, ಹಲವು ಸಮಾಜದಲ್ಲಿ ಬೇರುಬಿಟ್ಟಿರುವ ದುಗುಡ, ದುಮ್ಮಾನಗಳನ್ನು ದೂರ ಮಾಡುವಂತಹ ದೇವರುಗಳಿಗೆ ಸಂಬಂಧಿಸಿವೆ. ಇಂತಹ ಸಾಲಿಗೆ ಸೇರುವ ಜೋಕುಮಾರ ಸ್ವಾಮಿಯ ಆರಾಧನೆ ಇದೀಗ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುತ್ತಿದೆ.
ಕೃಷಿಕ ಸಮೂಹದ ದೃಷ್ಟಿಯಲ್ಲಿ ಜೋಕುಮಾರ ಮಳೆ-ಬೆಳೆ ತರಿಸುವ, ಜನತೆಯ ಬಾಧೆಗಳನ್ನು ದೂರ ಮಾಡುವ ದೇವನಾಗಿ ಮೊದಲಿನಿಂದಲೂ ಆರಾಧನೆಗೊಳಗಾಗಿದ್ದಾನೆ. ಹೀಗಾಗಿ ಜೋಕುಮಾರ ಸ್ವಾಮಿಯ ಆರಾಧನೆಗೆ ಕೃಷಿಕ ಸಮೂಹ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಭಾದ್ರಪದ ಮಾಸದಲ್ಲಿ ಜೋಕುಮಾರ ಜನಿಸುತ್ತಾನೆ ಎನ್ನುವ ನಂಬಿಕೆ ಜನಪದದಲ್ಲಿದೆ. ಇದಕ್ಕೆ ಜ್ಯೋಕ್ಯಾನ ಹುಣ್ಣಿಮೆ ಎಂದು ಕರೆಯಲಾಗುತ್ತಿದ್ದು, ಪ್ರತಿ ಸಲ ಈ ಸಮಯದಲ್ಲಿ ಭಕ್ತಿ, ಶ್ರದ್ಧೆ, ಗೌರವ ಹಾಗೂ ನಿಷ್ಠೆ, ಸಡಗರದಿಂದ ಹುಣ್ಣಿಮೆ ಆಚರಿಸುವ ಪದ್ಧತಿ ಇಂದಿಗೂ ಈ ಭಾಗದಲ್ಲಿ ಚಾಲ್ತಿಯಲ್ಲಿದೆ.
ಅಂಬಿಗರು, ಕಬ್ಬಲಿಗರು, ಗಂಗೆಯ ಮಕ್ಕಳು, ಬಾರ್ಕಿ, ಬಾರಕೇರ ಸಮುದಾಯದವರು ಮನೆಯಲ್ಲಿ ತುಂಬಿದ ಅಷ್ಟಮಿ, ಎಳೆ ಅಷ್ಟಮಿ ತಿಥಿಯ ಮರುದಿನ ಮೂಲಾ ನಕ್ಷತ್ರದಂದು ಹುಟ್ಟುವ ಜೋಕುಮಾರ ಅನಂತನ ಹುಣ್ಣಿಮೆ ದಿನ ಕೆರೆಯ ಅಗಸರ (ಮಡಿವಾಳರ) ಕಲ್ಲಿನ ಅಡಿಯಲ್ಲಿ ಅಸುನೀಗುತ್ತಾನೆ ಎಂಬ ನಂಬಿಕೆಯಿದ್ದು, ಈ ಅನಂತನ ಹುಣ್ಣಿಮೆಯೇ ಜೋಕುಮಾರನ ಹುಣ್ಣಿಮೆ. ಜೋಕುಮಾರನನ್ನು ಬುಟ್ಟಿಯಲ್ಲಿ ಕೂಡಿಸಿಕೊಂಡು ಜೋಕ್ಯಾನ ವರ್ಣನೆಯ ಜನಪದ ಗೀತೆಗಳನ್ನು ಲಯಬದ್ಧವಾಗಿ ಹೇಳುತ್ತಾ ಹಳ್ಳಿಗಳ ಪ್ರತಿಯೊಂದು ಓಣಿಗಳಲ್ಲಿ ತಿರುಗಾಡುತ್ತಾರೆ.
ಜೋಕುಮಾರ ಮನೆ ಎದುರು ಪ್ರತ್ಯಕ್ಷವಾದಾಗ ಅಕ್ಕಿ ಇನ್ನಿತರ ಬಗೆಯ ಕಾಳು, ಕಡಿಯನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಜೋಕುಮಾರನ ಬುಟ್ಟಿ ಹೊತ್ತು ತಂದ ಮಹಿಳೆಯರು ಬೇವಿನ ತಪ್ಪಲು ಹಾಗೂ ನುಚ್ಚನ್ನು ಪ್ರಸಾದದ ರೂಪದಲ್ಲಿ ನೀಡಿ ತೆರಳುತ್ತಾರೆ. ಜೋಕುಮಾರ ಸ್ವಾಮಿಯದು ಬಹು ವಿಶಿಷ್ಟವಾದ ವ್ಯಕ್ತಿತ್ವ. ಅಗಲವಾದ ಮುಖ ದಿಟ್ಟ ಕಣ್ಣುಗಳು, ಎತ್ತರದ ತಿಲಕ, ಚೂಪಾದ ಮೀಸೆ, ತೆರೆದ ಬಾಯಿ, ಹಣೆ ತುಂಬ ವಿಭೂತಿ-ಕುಂಕುಮ ಇಷ್ಟೆಲ್ಲ ಶೋಭಾಯಮಾನವಾಗಿ ಬೇವಿನ ತಪ್ಪಲಿರುವ ಬುಟ್ಟಿಯೊಳಗೆ 7 ದಿನಗಳ ಕಾಲ ಕುಳಿತುಕೊಂಡು ಊರು-ಕೇರಿ ತಿರುಗುತ್ತಾನೆ. ಮೂರ್ನಾಲ್ಕು ಮಹಿಳೆಯರು ಜೋಕುಮಾರನ ಬುಟ್ಟಿಯನ್ನು ಹೊತ್ತುಕೊಂಡು ಆತನ ಸ್ತುತಿಯನ್ನು ಹಾಡುತ್ತಾ ಅಲೆದಾಡುತ್ತಾರೆ.
ಉಪ್ಪು ಹುಣಸೆಹಣ್ಣು, ದವಸ, ಧಾನ್ಯಗಳನ್ನು ಜೋಕುಮಾರನಿಗೆ ಕಾಣಿಕೆಯಾಗಿ ನೀಡಿದರೆ ರೋಗ-ರುಜಿನ, ತಿಗಣೆ ಕಾಟ, ಕ್ರಿಮಿ-ಕೀಟಗಳ ಹಾವಳಿ ತಪ್ಪುತ್ತದೆ, ಮಳೆ-ಬೆಳೆ ಹುಲುಸಾಗಲಿದೆ ಎಂಬ ಬಲವಾದ ನಂಬಿಕೆ ಇದೆ. ವಿಶೇಷವಾಗಿ ಮಕ್ಕಳಿಲ್ಲದವರು ಜೋಕುಮಾರನಲ್ಲಿ ಹರಕೆ ಹೊತ್ತರೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ವಿಶ್ವಾಸ ಗಾಢವಾಗಿದೆ. ಜೋಕುಮಾರನ ಹುಣ್ಣಿಯನ್ನು ಆಚರಿಸುವ 7 ದಿನಗಳು ನವದಂಪತಿಗಳ ಪಾಲಿಗೆ ತುಂಬಾ ಅನಾಹುತಕಾರಿಯಾದ ದಿನಗಳು ಎಂಬ ಆತಂಕ ಇಂದಿಗೂ ಬೇರುಬಿಟ್ಟಿದೆ. ಈ ಸಮಯಕ್ಕೆ ಜೋಕ್ಯಾನ ಬೇಲಿ ಎಂದು ಕರೆಯಲಾಗುತ್ತದೆ. ಹೊಸದಾಗಿ ಮದುವೆಯಾದವರು ಒಟ್ಟಾಗಿ ಇರುವುದು ನಿಷೇಧ. ಇದಕ್ಕೆ ಹಲವಾರು ವಿವರಣೆಗಳನ್ನೂ ನೀಡಲಾಗುತ್ತದೆ.
ಜೋಕುಮಾರನಿಗೆ ಬೆಣ್ಣೆ ಎಂದರೆ ತುಂಬಾ ಪ್ರೀತಿ. ಮಕ್ಕಳಾಗದವರು ಸಂತಾನ ಭಾಗ್ಯಕ್ಕಾಗಿ ಜೋಕುಮಾರನಿಗೆ ಬೆಣ್ಣೆ ಹಚ್ಚಿ ಪೂಜಿಸುತ್ತಾರೆ. ಜೋಕುಮಾರನ ಸುತ್ತಿರುವ ಬೇವಿನ ಎಲೆಯನ್ನು ದನದ ಕೊಟ್ಟಿಗೆಯಲ್ಲಿ ಸುಟ್ಟು ಹೊಗೆ ಹರಡಿಸಿದರೆ ದನಕರುಗಳಿಗೆ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ ಎನ್ನುವ ಅಭಿಪ್ರಾಯವೂ ಇದೆ. ಆಧುನಿಕತೆಯ ಗಾಳಿಯಿಂದಾಗಿ ಹಬ್ಬಗಳ ಆಚರಣೆಗಳಲ್ಲಿ ಶ್ರದ್ಧೆ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಜೋಕುಮಾರ ಸ್ವಾಮಿ ಹಬ್ಬದ ವಿಶಿಷ್ಟ ಆಚರಣೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಪ್ರಸ್ತುತವಾಗಿದೆ.
ಜೋಕುಮಾರನನ್ನು ಪೂಜಿಸಿದರೆ ಮಳೆ ಬರುವುದೆಂಬ ನಂಬಿಕೆ ರೈತರಲ್ಲಿ ಹಾಸುಹೊಕ್ಕಾಗಿದೆ. ಈಗ ಏಳು ದಿನ ಊರೂರು ಅಲೆಯುತ್ತೇವೆ. ರೈತರಿಗೆ ಸಮೃದ್ಧಿ ಮಳೆ, ಬೆಳೆ ಕರುಣಿಸಲು ಬೇಡುತ್ತೇವೆ ಎನ್ನುತ್ತಾರೆ ಅಬ್ಬಿಗೇರಿ ಗ್ರಾಮದ ನಿವಾಸಿ ಬಸವ್ವ ಬಾರಕೇರ, ಹನಮವ್ವ ಬಾರಕೇರ.
ಶಿವ-ಪಾರ್ವತಿ ಭೂಲೋಕದ ಜನರ ಕಷ್ಟಗಳನ್ನು ತಿಳಿಯಲು ಗಣೇಶನನ್ನು ಕಳುಹಿಸುತ್ತಾರೆ. ಶುಕ್ಲಪಕ್ಷದ ಚೌತಿದಿನ ಧರೆಗಿಳಿದ ಗಣೇಶ, ನನಗೆ ಅದು ಬೇಕು ಇದು ಬೇಕೆಂದು ಪಟ್ಟು ಹಿಡಿದು, ಪುನಃ ಶಿವಲೋಕ್ಕೆ ಹೋಗಿ ಭೂಲೋಕದಲ್ಲಿ ಸರ್ವರೂ ಸುಖಿಯಾಗಿರುವವರು ಎಂದು ಹೇಳುತ್ತಾನೆ. ಗಣಪನ ಮಾತಿನಲ್ಲಿ ವಿಶ್ವಾಸ ಬಾರದ ಶಿವನು ಭೂಲೋಕದ ಜನರ ಕಷ್ಟ ತಿಳಿಯಲು ಜೋಕುಮಾರನನ್ನು ಕಳುಹಿಸುತ್ತಾನೆ. ಶಿವನ ಆಜ್ಞೆಯಂತೆ ಭೂಲೋಕಕ್ಕೆ ಬಂದ ಜೋಕುಮಾರ ಊರೂರುಗಳಿಗೆ ಅಲೆಯುತ್ತಾ ಜನರ ಕಷ್ಟಗಳನ್ನು ಆಲಿಸುತ್ತಾನೆ. ಪುನಃ ಶಿವನ ಬಳಿ ಹೋಗಿ ಧರೆಯಲ್ಲಿ ಎಲ್ಲರೂ ಕಷ್ಟದಿಂದ ಇದ್ದಾರೆ ಎಂದಾಗ ಶಿವ ಭೂಮಿಗೆ ಮಳೆ ಸುರಿಸುತ್ತಾನೆ ಎಂಬ ಪೌರಾಣಿಕ ಕತೆಯು ಈ ಆಚರಣೆಯ ಹಿಂದಿದೆ.
– ಲಕ್ಷ್ಮವ್ವ ಬಾರಕೇರ.
ಅಬ್ಬಿಗೇರಿ, ರೋಣ.