ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಅವ್ವ ಸೇವಾ ಟ್ರಸ್ಟ್ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಸ್ಮರಣಾರ್ಥ ರಾಜ್ಯ ಮಟ್ಟದಲ್ಲಿ ಮಹಿಳಾ ಪತ್ರಕರ್ತರಿಗಾಗಿ ಪ್ರಶಸ್ತಿ ನೀಡಲು ಸ್ಥಾಪಿಸಿರುವ ದತ್ತಿ ನಿಧಿಯ 2024ನೇ ಸಾಲಿನ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ, ಸಿನಿ ಜೋಷ್ ಮಾಸಪತ್ರಿಕೆಯ ಪ್ರಧಾನ ಸಂಪಾದಕಿ ಬೆಂಗಳೂರಿನ ಕೆ.ಎಚ್. ಸಾವಿತ್ರಿ ಅವರನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಎಂ.ಹೆಬ್ಬಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ದತ್ತಿ ಪ್ರಶಸ್ತಿಗೆ ಕೆ.ಎಚ್. ಸಾವಿತ್ರಿ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.
ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಜುಲೈ 28ರಂದು ಗದಗನಲ್ಲಿ ವಾರ್ತಾ ಇಲಾಖೆ ಸಹಯೋಗದಲ್ಲಿ ನಡೆಯಲಿರುವ ಗದಗ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಘನ ಉಪಸ್ಥಿತಿಯಲ್ಲಿ ರಾಜ್ಯದ ಕಾನೂನು ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ‘ಮಾಧ್ಯಮ ಚೇತನ’ ಎಂಬ ರಾಜ್ಯಮಟ್ಟದ ಪ್ರಶಸ್ತಿ ನೀಡಿ, ಗೌರವಿಸಲಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಅವ್ವ ಸೇವಾ ಟ್ರಸ್ಟ್ನ ಸಂಚಾಲಕ ಡಾ.ಬಸವರಾಜ ಧಾರವಾಡ, ಆಯ್ಕೆ ಸಮಿತಿಯ ಸದಸ್ಯರಾದ ಪತ್ರಕರ್ತರಾದ ಸಂಜೀವ ಪಾಂಡ್ರೆ, ಶಿವಕುಮಾರ ಕುಷ್ಟಗಿ, ಕಾನಿಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಂ. ಶರೀಫನವರ ಇದ್ದರು ಎಂದು ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಕಟಣೆ ತಿಳಿಸಿದೆ.