ವಿಜಯಸಾಕ್ಷಿ ಸುದ್ದಿ, ಗದಗ : ಪ್ರಪಂಚದಾದ್ಯಂತ ಪ್ರತಿ ವರ್ಷ ಜುಲೈ 12ರಂದು ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ಗದಗ-ಬೆಟಗೇರಿಯು ಗದಗ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಪೇಪರ್ ಬ್ಯಾಗ್ ಹಂಚಿ ಜನರಿಗೆ ಪ್ಲಾಸ್ಟಿಕ್ ಚೀಲ ತ್ಯಜಿಸಿ ಕಾಗದದ ಚೀಲ ಬಳಸುವಂತೆ ಪ್ರೇರೇಪಿಸಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ನಾಗರತ್ನ ಮಾರನಬಸರಿ ಮಾತನಾಡಿ, ಜಾಗೃತಿ ಅಭಿಯಾನಗಳು, ಯೋಜನೆಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಪರಿಸರದ ಮೇಲೆ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಿ ಪ್ರಯೋಜನಕಾರಿ ಪರಿಣಾಮ ಬೀರುವ ಕಾರ್ಯಗಳನ್ನು ಮಾಡಲು ಮಕ್ಕಳು ಮತ್ತು ಹದಿಹರೆಯದವರನ್ನು ಪ್ರೇರೇಪಿಸಲು ಪೇಪರ್ ಬ್ಯಾಗ್ ಡೇ ಕಾರಣವಾಗಿದೆ ಎಂದರು.
ಡಾ. ಹನುಮಂತಗೌಡ ಕಲ್ಮನಿ ಮಾತನಾಡಿ, ಅತಿಯಾದ ಪ್ಲಾಸ್ಟಿಕ್ ಚೀಲ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉಪಯೋಗಿಸುವುದರಿಂದ ಪರಿಸರಕ್ಕೆ ತೀವ್ರವಾದ ಹಾನಿಯಾಗುತ್ತಿದೆ. ವಿಶ್ವದಾದ್ಯಂತ ಪ್ಲಾಸ್ಟಿಕ್ ದುರಂತವು ಇತ್ತೀಚೆಗೆ ಹೆಚ್ಚಿನ ಗಮನವನ್ನು ಪಡೆದುಕೊಂಡಿದೆ. ಪ್ಲಾಸ್ಟಿಕ್ ಚೀಲಗಳು ಮತ್ತು ಇತರ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಈ ತೊಂದರಗೆ ಪ್ರಮುಖ ಕಾರಣವಾಗಿದೆ. ಪೇಪರ್ ಬ್ಯಾಗ್‌ಗಳನ್ನು ಉಪಯೋಗಿಸಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ತ್ಯಜಿಸುವುದು ಪರಸರ ಸ್ನೇಹಿ ಕಾರ್ಯವಾಗಿದೆ ಎಂದರು.
ಕ್ಲಬ್ ಕಾರ್ಯದರ್ಶಿ ವೀಣಾ ತಿರ್ಲಾಪುರ, ISO ಪುಷ್ಪಾ ಭಂಡಾರಿ, ಖಜಾಂಚಿ ಪೂಜಾ ಭೂಮಾ, ಸುಮಾ ಪಾಟೀಲ್, ಶೀವಲೀಲಾ ಅಕ್ಕಿ, ಪುಷ್ಪಾ ಕೊರವಣ್ಣನವರ್, ಕಮಲಾ ಜಂಬಗಿ ಮತ್ತು ರೇಣುಕಾ ಅಮಾತ್ಯ ಉಪಸ್ಥಿತರಿದ್ದರು.