ತಮಿಳುನಾಡು: ಅಣ್ಣಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ಪ್ರಕರಣವನ್ನು ಸರ್ಕಾರ ಹೇಗೆ ನಿರ್ವಹಿಸಿದೆ ಎಂಬುದನ್ನು ವಿರೋಧಿಸಿ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಚಾಟಿ ತೆಗೆದುಕೊಂಡು ತಮಗೆ ತಾವೇ ಹೊಡೆದು ಕೊಂಡಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನ ತಮ್ಮ ಮನೆ ಮುಂದೆ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಚಾಟಿ ತೆಗೆದುಕೊಂಡು ತಮಗೆ ತಾವೇ ದಂಡಿಸಿಕೊಂಡರು. ಈ ರೀತಿಯಾಗಿ ಹೊಡೆದುಕೊಳ್ಳುವಾಗ ಕೆ.ಅಣ್ಣಾಮಲೈ ಅವರು ಕೇವಲ ಹಸಿರು ಪಂಚೆ ಮಾತ್ರ ಧರಿಸಿದ್ದರು.
ಶರ್ಟ್ ಹಾಕಿಕೊಂಡಿರಲಿಲ್ಲ. ಹೀಗಾಗಿ 8 ಬಾರಿ ಚಾಟಿ ಏಟು ಹೆಚ್ಚು ಬಲವಾಗಿಯೇ ಬಿದ್ದವು. ಇನ್ನು ಹೊಡೆದುಕೊಳ್ಳುವಾಗ ಪಕ್ಕದಲ್ಲಿದ್ದ ಪಕ್ಷದ ಮುಖಂಡರು ಬಂದು ತಡೆದರು. ಇಲ್ಲಿಗೆ ಅಣ್ಣಾಮಲೈ ಚಾಟಿಯಿಂದ ಹೊಡೆದುಕೊಳ್ಳುವುದನ್ನು ನಿಲ್ಲಿಸಿದರು. ಲೈಂಗಿಕ ದೌರ್ಜನ್ಯ ಪ್ರಕರಣವನ್ನು ನಿಭಾಯಿಸುವಲ್ಲಿ ಪೊಲೀಸರು ಮತ್ತು ರಾಜ್ಯ ಸರ್ಕಾರ ನಿರಾಸಕ್ತಿ ತೋರಿಸುತ್ತಿದೆ ಎಂದು ಪ್ರತಿಭಟನೆ ಮೂಲಕ ಖಂಡಿಸಿದ್ದಾರೆ.
ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ವಿರುದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಡಿಎಂಕೆ ವಿದ್ಯಾರ್ಥಿ ಘಟಕದ ಕಾರ್ಯದರ್ಶ ಜ್ಞಾನಶೇಖರನ್ ಅವರನ್ನು ಬಂಧಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಹಿಳೆಯರಿಗೆ ಭದ್ರತೆ ಇಲ್ಲ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅಣ್ಣಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಇಂದು ಬಿಜೆಪಿ ಮತ್ತು ಎಐಎಡಿಎಂಕೆ ಪ್ರತ್ಯೇಕ ಪ್ರತಿಭಟನೆ ನಡೆಸಿವೆ.