ಭಾರತೀಯ ಚಿತ್ರರಂಗದಲ್ಲಿ ಕಾಂತಾರ ಚಾಪ್ಟರ್ 1 ಮತ್ತೊಂದು ಅದ್ಭುತ ದಾಖಲೆಯನ್ನು ಸೃಷ್ಟಿಸಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆಯನ್ನು ತೆಗೆಯುತ್ತಿದೆ. ಕಾಂತಾರ-1 ಸಿನಿಮಾದ ಬಗ್ಗೆ ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಬಾಲಿವುಡ್,
ಟಾಲಿವುಡ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕೂಡ ಕಾಂತಾರ ಚಾಪ್ಟರ್-1 ಸಿನಿಮಾ ವೀಕ್ಷಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಚಿತ್ರದ ಬಗ್ಗೆ ಹಾಗೂ ರಿಷಬ್ ಶೆಟ್ಟಿ ನಟನೆಯನ್ನು ಕೊಂಡಾಡಿದ್ದಾರೆ.
ಕಾಂತಾರ ಚಾಪ್ಟರ್-1 ಸಿನಿಮಾ ವೀಕ್ಷಿಸಿದೆ. ಈ ಸಿನಿಮಾ ನಂಬಿಕೆ ಮತ್ತು ಜಾನಪದದ ಮಿಶ್ರಣವಾಗಿದೆ. ರಿಷಬ್ ಶೆಟ್ಟಿಯವರು ನಿರ್ದೇಶಕ ಮತ್ತು ನಾಯಕ ನಟರಾಗಿ ಅದ್ಭುತ ಅಭಿನಯವನ್ನು ನೀಡಿದ್ದಾರೆ. ಧರ್ಮದ ಸಾರ, ತುಳುನಾಡಿನ ಸಂಸ್ಕೃತಿ, ಪಂಜುರ್ಲಿ ದೇವರು ಮತ್ತು ಗುಳಿಗನ ಆರಾಧನೆ ಮತ್ತು ಅವುಗಳ ವಿವಿಧ ಅಭಿವ್ಯಕ್ತಿಗಳನ್ನು ಒಟ್ಟುಗೂಡಿಸುತ್ತಾರೆ.
ವಿಶ್ವವನ್ನು ಸ್ಥಿರವಾಗಿರಿಸುವ ಮತ್ತು ಅದನ್ನು ಧರ್ಮದ ಹಾದಿಗೆ ಮರಳಿ ತರುವ ಪಂಚ ಭೂತಗಳ ಸಮತೋಲನವನ್ನು ಸಿನಿಮಾದಲ್ಲಿ ಸ್ಪಷ್ಟವಾಗಿ ಸೆರೆಹಿಡಿಯಲಾಗಿದೆ. ಚಿತ್ರದ ಪ್ರತಿಯೊಂದು ಚೌಕಟ್ಟು ಕರಕುಶಲತೆಯನ್ನು ಪ್ರದರ್ಶಿಸುತ್ತದೆ. ಇದು ನಿಜವಾಗಿಯೂ ವಿಶ್ವ ದರ್ಜೆಯ ನಿರ್ಮಾಣ ಎಂದು ಬಣ್ಣಿಸಿದ್ದಾರೆ. ನಾಗರಿಕ ಸೇವಕನಾಗಿ ನನ್ನ ಸೇವೆಯ ಸಮಯದಲ್ಲಿ ಅಂತಹ ಆಳವಾದ ಬೇರೂರಿರುವ ಸಂಪ್ರದಾಯಗಳನ್ನು ನೇರವಾಗಿ ಕಂಡಿದ್ದೇನೆ.
ಈ ಚಿತ್ರವನ್ನು ನೋಡಿದ ಮೇಲೆ ಆಧ್ಯಾತ್ಮಿಕ ಮರಳುವಿಕೆ ಮತ್ತು ನೆನಪಿನ ಹಾದಿಯಲ್ಲಿ ನಡೆದಂತೆ ಭಾಸವಾಯಿತು. ನಮ್ಮ ಚಲನಚಿತ್ರಗಳು ವೋಕ್ ಸಂಸ್ಕೃತಿಯಿಂದ ಪ್ರಾಬಲ್ಯ ಹೊಂದಿರುವ ಯುಗದಲ್ಲಿ, ಭಾರತದ ಆತ್ಮವನ್ನು ಮತ್ತೊಮ್ಮೆ ಬೆಳಕಿಗೆ ತಂದಿದ್ದಕ್ಕಾಗಿ ಹೊಂಬಾಳೆ ಫಿಲಂಸ್‌ಗೆ ಧನ್ಯವಾದಗಳು ಎಂದು ಹೊಗಳಿದ್ದಾರೆ.