ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಗಮನಸೆಳೆದ ‘ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್’ ಮೊದಲ ಸೀಸನ್ ಯಶಸ್ಸಿನ ಬಳಿಕ ಇದೀಗ ಸೀಸನ್-2 ಭರ್ಜರಿಯಾಗಿ ಆರಂಭಗೊಳ್ಳುತ್ತಿದೆ.
ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಏಪ್ರಿಲ್ 12ರಿಂದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಲಿದ್ದು, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭಕ್ಕೆ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ವಿಶೇಷವಾಗಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರಾದ ಸುನಿಲ್ ಜೋಶಿ, ಸುಜಿತ್ ಸೋಮಶೇಖರ್ ಮತ್ತು ಈರಣ್ಣ ಸವಡಿ ಭಾಗವಹಿಸಲಿದ್ದಾರೆ.
ಈ ಬಾರಿ ಲೀಗ್‌ನಲ್ಲಿ 20 ತಂಡಗಳು ಸ್ಪರ್ಧಿಸುತ್ತಿದ್ದು, ಒಟ್ಟು 456 ಆಟಗಾರರು ನೋಂದಾಯಿತರಾಗಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ 320 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರತಿ ತಂಡದಲ್ಲಿ ಕನಿಷ್ಠ 5 ಗ್ರಾಮೀಣ ಆಟಗಾರರನ್ನು ಸೇರಿಸಲಾಗಿದೆ.
ಮಾರ್ಚ್ 22 ಮತ್ತು 23ರಂದು ನಡೆದ ಹರಾಜಿನಲ್ಲಿ ಆಟಗಾರರು ಭಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಎಡ್ವರ್ಡ್ 44 ಸಾವಿರ ರೂ., ಶಂಕರ 42 ಸಾವಿರ ರೂ., ಯುವರಾಜ್ 36 ಸಾವಿರ ರೂ., ವೈಭವ್ ಮತ್ತು ಫಯಾಜ್ ತಲಾ 34 ಸಾವಿರ ರೂ.ಗೆ ಬಿಡ್ ಆಗಿದ್ದಾರೆ.
ಪ್ರಥಮ ಬಹುಮಾನ 2 ಲಕ್ಷ ರೂ., ದ್ವಿತೀಯ 1.5 ಲಕ್ಷ ರೂ. ಘೋಷಿಸಲಾಗಿದೆ. ಜೊತೆಗೆ ಟೂರ್ನಿಯ ಶ್ರೇಷ್ಠ ಆಟಗಾರನಿಗೆ 25 ಸಾವಿರ ರೂ., ಅತ್ಯುತ್ತಮ ಬ್ಯಾಟ್ಸಮನ್ ಮತ್ತು ಬಾಲರ್‌ಗೆ ತಲಾ 10 ಸಾವಿರ ರೂ. ಸೇರಿದಂತೆ ಅನೇಕ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.
ಒಟ್ಟು 18 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಅತ್ಯುತ್ತಮ ಬೆಳಕು ವ್ಯವಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಹಾಗೂ ಥರ್ಡ್ ಅಂಪೈರ್ ವ್ಯವಸ್ಥೆ ಸಹ ಇರಲಿದೆ.
ಸುದ್ದಿಗೋಷ್ಠಿಯಲ್ಲಿ ಸಿದ್ಧಲಿಂಗೇಶ್ವರ ಪಾಟೀಲ, ಅಶೋಕ ಮಂದಾಲಿ, ಉಮರಫಾರೂಕ್ ಹುಬ್ಬಳ್ಳಿ, ಸರ್ಫರಾಜ್ ಶೇಖ್, ಅಹ್ಮದ ಖಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



