ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿರುವ ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ 21 ಸಾವಿರ ಕೋಟಿ ರೂ. ವೆಚ್ಚದ 5 ಮತ್ತು 6ನೇ ಅಣು ವಿದ್ಯುತ್ ಘಟಕಗಳ ನಿರ್ಮಾಣ ಕಾರ್ಯ ಮುಂದುವರಿದಿದೆ. ಭಾನುವಾರ ಕಾಂಕ್ರೀಟಿಕರಣ ಕಾರ್ಯಕ್ಕೆ ಅಣು ಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ್ ಮೊಹಂತಿ ಚಾಲನೆ ನೀಡಿದರು.
2000ರಲ್ಲಿ ಸ್ಥಾಪಿತವಾದ ಈ ಕೇಂದ್ರದಲ್ಲಿ ಈಗಾಗಲೇ ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 2,280 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ವಿದ್ಯುತ್ ಬೇಡಿಕೆ ಹೆಚ್ಚಳದ ಹಿನ್ನೆಲೆ ತಲಾ 700 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಹೊಸ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.
2030ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಎನ್ಪಿಸಿ ನಿರ್ದೇಶಕ ವಿನೋದ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೊಸ ಘಟಕಗಳ ಆರಂಭದಿಂದ ಸ್ಥಳೀಯರಿಗೆ 1400 ರಿಂದ 1600 ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ ಇದೆ.



