ಬೆಂಗಳೂರು: ರಕ್ಷಣಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮ ಬೀರಿರುವ ‘ಮೇಕ್ ಇನ್ ಇಂಡಿಯಾ’ ಯೋಜನೆ ಇದೀಗ ಅಣುಶಕ್ತಿ ಕ್ಷೇತ್ರದಲ್ಲೂ ಮಹತ್ವದ ಹೆಜ್ಜೆ ಇಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಗಿದೆ. ಈ ಘಟಕಗಳಲ್ಲಿ ಸ್ಥಾಪನೆಯಾಗುವ 700 ಮೆಗಾವಾಟ್ ಸಾಮರ್ಥ್ಯದ ಪ್ರೆಷರೈಸ್ಡ್ ಹೆವಿ ವಾಟರ್ ರಿಯಾಕ್ಟರ್‌ಗಳು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಾಣಗೊಳ್ಳುತ್ತಿರುವುದು ವಿಶೇಷವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೈಗಾ ಘಟಕದ ಸೈಟ್ ನಿರ್ದೇಶಕ ಬಿ. ವಿನೋದ್ ಕುಮಾರ್ ಅವರು, ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ರಿಯಾಕ್ಟರ್‌ಗಳನ್ನು ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಫ್ಲೀಟ್ ಮೋಡ್‌ನಲ್ಲಿ 10 ಅಣು ವಿದ್ಯುತ್ ಯೋಜನೆಗಳಿಗೆ ಅನುಮೋದನೆ ನೀಡಿದ್ದು, 700 ಮೆಗಾವಾಟ್ ಸಾಮರ್ಥ್ಯದ ರಿಯಾಕ್ಟರ್‌ಗಳನ್ನು ಗುಜರಾತ್, ರಾಜಸ್ಥಾನ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಸ್ಥಾಪಿಸಲಾಗುತ್ತಿದೆ. ಇದರಿಂದ ಮೊದಲ ಬಾರಿಗೆ ಈ ಪ್ರಮಾಣದ ಸ್ವದೇಶೀ ರಿಯಾಕ್ಟರ್‌ಗಳನ್ನು ವ್ಯಾಪಕವಾಗಿ ಅಳವಡಿಸಲಾಗುತ್ತಿದೆ ಎಂದರು.
ಹಳೆಯ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಉತ್ಪಾದಿತ ವಿದ್ಯುತ್‌ನ ಶೇ.20ರಷ್ಟು ಪಾಲು ಸಿಗುತ್ತಿತ್ತು. ಆದರೆ ಹೊಸ ಯೋಜನೆಯಡಿ ಕರ್ನಾಟಕಕ್ಕೆ ಶೇ.50ರಷ್ಟು ವಿದ್ಯುತ್ ಪಾಲು ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಸ್ತುತ ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಾಪಿತ ಸಾಮರ್ಥ್ಯ 880 ಮೆಗಾವಾಟ್ ಆಗಿದೆ. 5 ಮತ್ತು 6ನೇ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಿದ ಬಳಿಕ ಒಟ್ಟು ಸಾಮರ್ಥ್ಯ 2,280 ಮೆಗಾವಾಟ್‌ಗೆ ಏರಲಿದೆ.
ರಾಜ್ಯದಲ್ಲಿ ಇನ್ನೂ 7,000 ಮೆಗಾವಾಟ್ ಹೆಚ್ಚುವರಿ ಸಾಮರ್ಥ್ಯ ಅಭಿವೃದ್ಧಿಗೆ ಸಿದ್ಧತೆ ನಡೆಯುತ್ತಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಕರ್ನಾಟಕಕ್ಕೆ ಮತ್ತೊಂದು ಮಹತ್ವದ ಅಣು ವಿದ್ಯುತ್ ಯೋಜನೆ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ನೂತನ ಘಟಕಗಳ ಕಾಮಗಾರಿಗೆ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ್ ಮೊಹಾಂತಿ ಹಾಗೂ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭುವನ್ ಚಂದ್ರ ಪಾಠಕ್ ಉಪಸ್ಥಿತರಿದ್ದರು. ಈ ಘಟಕಗಳು ಮುಂದಿನ ಐದು ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆಗೆ ಬರಲಿವೆ ಎಂದು ತಿಳಿಸಲಾಗಿದೆ.



