ಕಲಬುರ್ಗಿ:- ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ನಾಳೆ ವಿವಿಧ ದಲಿತ ಪರ ಸಂಘಟನೆಗಳಿಂದ ಕಲಬುರಗಿ ಬಂದ್ಗೆ ಕರೆ ನೀಡಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜಿಗೆ ಡಿಡಿಪಿಐ ಸೂರ್ಯಕಾಂತ್ ರಜೆ ಘೋಷಿಸಿದ್ದಾರೆ.
ಬಂದ್ ಹಿನ್ನೆಲೆ ನಾಳೆ ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ. ಅಂಬೇಡ್ಕರ್ ವಿರುದ್ದದ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಕೂಡ ಜಿಲ್ಲೆಯ ಆಳಂದ ಪಟ್ಟಣದಲ್ಲಿ ವಿವಿಧ ದಲಿತ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗಿದೆ.
ರಸ್ತೆ, ಅಂಗಡಿ, ಮುಂಗಟ್ಟು ಬಂದ್ ಮಾಡಿ, ರಸ್ತೆ ಮೇಲೆ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಅಮಿತ್ ಶಾ ಅವರನ್ನು ಸಂಪುಟದಿಂದ ತೆಗೆದು ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಇನ್ನೂ ಅಂಬೇಡ್ಕರ್ ಅಂತಾ ಹೇಳುವುದು ಕೆಲವರಿಗೆ ಫ್ಯಾಷನ್ ಆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಇದೇ ಮಾತು ಕಾಂಗ್ರೆಸ್‌ನವರಿಗೆ ಅಸ್ತ್ರವಾಗಿದೆ. ದೇಶಾದ್ಯಂತ ಪ್ರತಿಭಟನೆ ಕಿಡಿ ಹೊತ್ತಿಸಿದೆ. ಇತ್ತ ಕರ್ನಾಟಕದಲ್ಲೂ ಆಕ್ರೋಶ ವ್ಯಕ್ತವಾಗಿದೆ.