ಕಲಬುರ್ಗಿ:- ಕಲಬುರಗಿ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಸೇನೆ ಅಧ್ಯಕ್ಷ ಸೇರಿ 6 ಜನರನ್ನು ಬಂಧಿಸಲಾಗಿದೆ.
ಎ1 ಆರೋಪಿ ಆಗಿರುವ ಪ್ರಭು ಹಿರೇಮಠ ಮತ್ತು ರಾಜು ಲೇಂಗಟಿಯನ್ನ ಮಾತ್ರ ಬಂಧಿಸಿ ಸೈಲೆಂಟ್ ಆಗಿತ್ತು. ಹೀಗಾಗಿ ಪೊಲೀಸರ ವಿರುದ್ದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಉಳಿದ ಆರೋಪಿಗಳು ಪ್ರಭಾವಿಗಳಾದ ಹಿನ್ನಲೆ ಬಂಧಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಆದ್ರೆ, ನಿನ್ನೆ ರಾತೋರಾತ್ರಿ ಪ್ರಕರಣದ ಉಳಿದೆಲ್ಲ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ಸೈಬರ್ ಕ್ರೈಂ ಠಾಣೆ ಪೊಲೀಸರು ದಲಿತಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಮಂಜುನಾಥ ಭಂಡಾರಿ, ಶ್ರೀಕಾಂತ್ ರೆಡ್ಡಿ, ಉದಯಕುಮಾರ್ ಖಣಗೆ, ಅರವಿಂದ ಕಮಲಾಪುರ ಸೇರಿದಂತೆ ಆರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಎಲ್ಲಾ ಆರೋಪಿಗಳನ್ನ ಬಂಧಿಸಿ ಸೆನ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಬಳಿಕ ಆರೋಪಿಗಳನ್ನ ವೈದ್ಯಕೀಯ ತಪಾಸಣೆ ನಡೆಸಿ ಸೆಪ್ಟೆಂಬರ್ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆಯೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್‌ಡಿ ಹೇಳಿದ್ದಾರೆ.
ಇನ್ನು ತನಿಖೆ ವೇಳೆ ಆರೋಪಿಗಳ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದ್ದು, ಮೊಬೈಲ್‌ಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ತನಿಖೆ ಬಳಿಕವಷ್ಟೇ ಬಂಧಿತ ಆರೋಪಿಗಳ ಪಾತ್ರ ಏನು ಎನ್ನುವುದು ತಿಳಿಯಲಿದೆಯೆಂದು ಕಮಿಷನರ್ ಹೇಳಿದರು.
ಹನಿಟ್ರ್ಯಾಪ್ ಗ್ಯಾಂಗ್‌ನ ಕೃತ್ಯಕ್ಕೆ ಯಾರಾದರೂ ಅನ್ಯಾಯಕ್ಕೊಳಗಾದರೆ ಅಂತವರು ಧೈರ್ಯದಿಂದ ದೂರು ನೀಡಲಿ. ಅವರ ಹೆಸರು ಗೌಪ್ಯವಾಗಿಡುವುದರ ಜೊತೆಗೆ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಲಾಗುವುದೆಂದು ಹೇಳಿದ್ದಾರೆ.