ಹಗಲು ದೇವರ ಪ್ರತಿಮೆ ಹೊತ್ತು ಗಲ್ಲಿ ಗಲ್ಲಿ ಸುತ್ತಾಟ; ರಾತ್ರಿ ದರೋಡೆ!

0
Spread the love

ವಿಜಯಸಾಕ್ಷಿ ಸುದ್ದಿ, ಕಲಬುರಗಿ

Advertisement

ಕಲಬುರ್ಗಿಯಲ್ಲಿ ಪೊಲೀಸರು ಖತರ್ನಾಕ್ ದರೋಡೆಕೋರರ ತಂಡವೊಂದರ ಹೆಡೆಮುರಿ ಕಟ್ಟಿದ್ದಾರೆ. ಮಂಗಳವಾರ ರಾತ್ರಿ ಭರ್ಜರಿ ಆಪರೇಶನ್ ಮೂಲಕ ಮಹಾರಾಷ್ಟ್ರ ಮೂಲದ ಇಬ್ಬರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಅವರ ಪತ್ತೆಗೆ ತಂಡ ರಚಿಸಲಾಗಿದೆ.

ನಡೆದಿದ್ದೇನು?

ಮಂಗಳವಾರ ರಾತ್ರಿಯ ವೇಳೆ ಕಲಬುರ್ಗಿಯ ಬಿದ್ದಾಪೂರ ಕಾಲೋನಿಯ ಜನರೆಲ್ಲರೂ ಸವಿನಿದ್ರೆಯಲ್ಲಿದ್ದಾಗ ಆ ಪ್ರದೇಶದಲ್ಲಿಯೇ ಇದ್ದಕ್ಕಿದ್ದಂತೆ ಗುಂಡಿನ ಶಬ್ಧ ಕೇಳಿಬಂದಿತು. ನಾಲ್ವರು ದರೋಡೆಕೋರರ ತಂಡವೊಂದು ಅದೇ ಕಾಲೋನಿಯ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡುತ್ತಿತ್ತು. ಕರ್ತವ್ಯನಿರತ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಈ ತಂಡದ ಇಬ್ಬರು ದರೋಡೆಕೋರರನ್ನು ಹಿಡಿದರು. ಆದರೆ, ಈ ವೇಳೆ ಪೊಲೀಸ್ ಪೇದೆ ಶಿವಶರಣ ಎಂಬುವರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತ್ಮರಕ್ಷಣೆಗಾಗಿ ಅಶೋಕನಗರದ ಸರ್ಕಲ್ ಇನ್ಸ್‌ಪೆಕ್ಟರ್ ಪಂಡಿತ ಸಗರ್ ತಮ್ಮ ರಿವಾಲ್ವರ್ನಿಂದ ದರೋಡೆಕೋರರ ಮೇಲೆ ಫೈರಿಂಗ್ ಮಾಡಿದ್ದಾರೆ.

ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರ್ ತಾಲೂಕಿನ ಝಳಕೋಳದ ಲಾವ ಮತ್ತು ದೇವಿದಾಸ ಎಂಬಿಬ್ಬರು ದರೋಡೆಕೋರರ ಕಾಲಿಗೆ ಗುಂಡೇಟು ತಾಗಿದೆ. ಗಾಯಗೊಂಡ ಇವರಿಬ್ಬರನ್ನೂ ಬಂಧಿಸಿ ಚಿಕಿತ್ಸೆಗಾಗಿ ಕಲಬುರ್ಗಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಪೊಲೀಸ್ ಕಾನ್ಸ್‌ಟೇಬಲ್ ಶಿವಶರಣರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಕಲಬುರ್ಗಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುಖ್ಯಾತ ಗ್ಯಾಂಗ್ ಸದಸ್ಯರು ಹಲವು ದಿನಗಳಿಂದ ಹಗಲಿನ ಸಮಯದಲ್ಲಿ ದೇವರ ಪ್ರತಿಮೆಯನ್ನು ಹೊತ್ತು ಗಲ್ಲಿ ಗಲ್ಲಿ ಸುತ್ತುತ್ತಿದ್ದರು. ರಾತ್ರಿಯ ಹೊತ್ತಿನಲ್ಲಿ ಅದೇ ಪ್ರದೇಶಗಳಲ್ಲಿ ದರೋಡೆ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here