ವಿಜಯಸಾಕ್ಷಿ ಸುದ್ದಿ, ಗದಗ: ಅನ್ನ, ಅಕ್ಷರ ಹಾಗೂ ಆಶ್ರಯ ದಾಸೋಹಗಳನ್ನು ನೀಡುವ ಮೂಲಕ ದಾಸೋಹ ಪರಂಪರೆಯನ್ನು ಉತ್ತುಂಗಕ್ಕೇರಿಸಿದ ಕಲ್ಬುರ್ಗಿ ಶರಣ ಬಸವೇಶ್ವರರು ಶರಣ ಸಮುದಾಯದಲ್ಲಿಯೇ ಶ್ರೇಷ್ಠ ಶರಣರಾಗಿದ್ದರು. ಅವರ ದಾಸೋಹ ಸೇವೆಯನ್ನು ಜೀವಿತಾವಧಿಯ ನಂತರವೂ ನಿರಂತರವಾಗಿ ನಡೆಸುವ ವಿಶೇಷ ಶಕ್ತಿಯನ್ನು ಹೊಂದಿರುವ ಶ್ರೇಷ್ಠ ಶರಣರು ಅವರಾಗಿದ್ದರು ಎಂದು ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮೀಜಿಗಳು ವರ್ಣಿಸಿದರು.
ನಗರದ ಶ್ರೀ ಕಟ್ಟಿ ಬಸವೇಶ್ವರ ಸಮುದಾಯ ಭವನ ಟ್ರಸ್ಟ್ ಹಾಗೂ ಕಟ್ಟಿ ಬಸವೇಶ್ವರ ದೇವಸ್ಥಾನ ಸಹಯೋಗದಲ್ಲಿ ನಡೆದ ಮಹಾದಾಸೋಹಿ ಕಲಬುರ್ಗಿ ಶರಣ ಬಸವೇಶ್ವರರ 47ನೇ ಪುರಾಣ ಮಹಾಮಂಗಲೋತ್ಸವ ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸ್ಯಿವರು ಆಶೀರ್ವಚನ ನೀಡಿದರು.
ಕಲಬುರ್ಗಿ ಶರಣ ಬಸವೇಶ್ವರರು ತ್ರಿವಿಧ ದಾಸೋಹ ಸೇವೆಗೆ ಹೆಸರುವಾಸಿಯಾಗಿದ್ದರು. ಅವರ ನಿರಂತರ ದಾಸೋಹ ಸೇವೆಯನ್ನು ಸ್ಮರಿಸಿ ಜಗತ್ತಿಗೆ ಪರಿಚಯಿಸುವ ಪ್ರಮುಖ ಉದ್ದೇಶದಿಂದ ಕಳೆದ 47 ವರ್ಷಗಳಿಂದ ಶ್ರೀ ಕಟ್ಟಿ ಬಸವೇಶ್ವರ ಸಮುದಾಯ ಭವನ ಟ್ರಸ್ಟ್ ಹಾಗೂ ಕಟ್ಟಿ ಬಸವೇಶ್ವರ ದೇವಸ್ಥಾನ ಪುರಾಣ ಪ್ರವಚನ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುತ್ತಿರುವದು ಶ್ಲಾಘನೀಯ ಸಂಗತಿಯಾಗಿದೆ ಎಂದರು.
ಗದಗ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರಾದ ಶರಣ ಬಸಪ್ಪ ಗುಡಿಮನಿ, ಕಳೆದ 47 ವರ್ಷಗಳಿಂದ ಈ ಭಾಗದಲ್ಲಿ ಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಪ್ರವಚನವನ್ನು ಯಶಸ್ವಿಗೊಳಿಸುವಲ್ಲಿ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಶ್ರಮ ಅಡಗಿದೆ. ಮಕ್ಕಳಿಗೆ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ ಅವರ ವ್ಯಕ್ತಿತ್ವವನ್ನು ರೂಪಿಸಬೇಕೆಂದು ಕರೆ ನೀಡಿದರು.
ಶ್ರೀ ಕಟ್ಟಿ ಬಸವೇಶ್ವರ ಸಮುದಾಯ ಭವನ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ರಂಗಪ್ಪ ಹೂಗಾರ ಮಾತನಾಡಿ, ಕಲಬುರ್ಗಿ ಶರಣ ಬಸವೇಶ್ವರರ ಕೃಪೆಯಿಂದಾಗಿಯೇ ಸುದೀರ್ಘ ವರುಷಗಳ ಕಾಲ ಯಶಸ್ವಿಯಾಗಿ ಪುರಾಣ ಪ್ರವಚನ ಧಾರ್ಮಿಕ ಕಾರ್ಯಕ್ರಮವನ್ನು ನಿರ್ವಹಣೆ ಮಾಡಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಮಯ, ಶ್ರಮ ನೀಡಿದ ಶ್ರೀ ಕಟ್ಟಿ ಬಸವೇಶ್ವರ ಸಮುದಾಯ ಭವನ ಟ್ರಸ್ಟ್ ಹಾಗೂ ಕಟ್ಟಿ ಬಸವೇಶ್ವರ ದೇವಸ್ಥಾನದ ಪದಾಧಿಕಾರಿಗಳು, ಹಿರಿಯರು, ಯುವಕರು ಹಾಗೂ ಸದ್ಬಕ್ತರಿಗೆ ಅಭಿನಂದನೆ ಸಲ್ಲಿಸಿದರು.
ಪುರಾಣ ಪ್ರವಚನ ನೀಡಿದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಬಸಯ್ಯ ಶಾಸ್ತ್ರಿ ಹಿರೇಮಠ, ಸಂಗೀತ ಸೇವೆ ನೀಡಿದ ಜಗನ್ನಾಥ ಶಿಂಧಗಿ, ತಬಲಾ ವಾದಕ ರತನ ಸೇಡಂ, ಗದಗ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರಾದ ಶರಣ ಬಸಪ್ಪ ಗುಡಿಮನಿ ಹಾಗೂ ನಗರಸಭಾ ಸದಸ್ಯ ಚಂದ್ರು ತಡಸದ ಅವರನ್ನು ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ಸನ್ಮಾನಿಸಿ, ಗೌರವಿಸಿದರು.
ಶ್ರೀ ಕಟ್ಟಿ ಬಸವೇಶ್ವರ ಸಮುದಾಯ ಭವನ ಟ್ರಸ್ಟ್ ಅಧ್ಯಕ್ಷರಾದ ಮಲ್ಲಿಕಾರ್ಜುನ ರಂಗಪ್ಪ ಹೂಗಾರ, ಶಂಭು ಕಾರದಕಟ್ಟಿ, ಭೀಮರೆಡ್ಡಿ ಕಿಲುಬನವರ, ಸಂತೋಷ ಕುಡತರಕರ, ನರಸಿಂಹ ಕುಡತರಕರ, ಮುತ್ತು ಕಾರದಕಟ್ಟಿ, ಸಿ.ಬಿ. ಟೋಪಗಿ, ಪುರಾಣ ಸಮಿತಿಯ ಪದಾಧಿಕಾರಿಗಳಾದ ಮಾರುತಿ ಮದಗುಣಕಿ, ಶಿವನಗೌಡ ಆಡೂರು, ಕಿರಣ ಗಡಾದ, ವಿರೇಂದ್ರ ಮಣ್ಣನವರ, ಗಂಗಾಧರ ಗಡಾದ, ಶಂಕರ ಗಡಾದ ಸೇರಿದಂತೆ ಸದ್ಭಕ್ತರಿದ್ದರು.
ಬಸವರಾಜ ಯಲಬುರ್ಗಿ ಧಾರ್ಮಿಕ ಕಾರ್ಯಕ್ರಮವನ್ನು ನಿರೂಪಿಸಿದರು.
ನಗರಸಭಾ ಸದಸ್ಯ ಚಂದ್ರು ತಡಸದ ಮಾತನಾಡಿ, ಶಹಪೂರ ಪೇಟೆಯ ಹಿರಿಯರು ಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಪ್ರವಚನ ಧಾರ್ಮಿಕ ಕಾರ್ಯಕ್ರಮದ ಮುನ್ನುಡಿ ಬರೆದಿದ್ದಾರೆ. ಕಲಬುರ್ಗಿ ಶರಣ ಬಸವೇಶ್ವರರು ತಮ್ಮ ದಾಸೋಹ ಸೇವೆಯ ಮೂಲಕ ದಾಸೋಹ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಅನ್ನ, ಅಕ್ಷರ ಹಾಗೂ ಆಶ್ರಯ ಸೇವೆಯ ಮೂಲಕ ಜನಮನ್ನಣೆ ಪಡೆದಿದ್ದರು. ಇಂದಿಗೂ ಅವರ ದಾಸೋಹ ಸೇವೆ ಜೀವಂತವಾಗಿದೆ ಎಂದು ಸ್ಮರಿಸಿದರು.



