ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಬಡ ಕುಟುಂಬದಲ್ಲಿ ಜನಿಸಿ, ಹಲವಾರು ಕಷ್ಟ-ನಷ್ಟಗಳನ್ನು ಅನುಭವಿಸಿ ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ಈ ದೇಶಕ್ಕೆ ಅಮೋಘ ಸೇವೆ ಸಲ್ಲಿಸಿದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗದಗ ಉಪವಿಭಾಗಾಧಿಕಾರಿ ಗಂಗಮ್ಮ ಎಂ ಹೇಳಿದರು.
ಇಲ್ಲಿಯ ಅನ್ನದಾನೀಶ್ವರ ಸಭಾಭವನದಲ್ಲಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಯೂಥ್ ಫೆಡರೇಶನ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಡಾ. ಕಲಾಂ ಅವರ 94ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಾಂ ಅವರು ನಮ್ಮೊಂದಿಗೆ ಇಂದು ಇಲ್ಲವಾದರೂ ಅವರ ಮಾಡಿದ ಸಾಧನೆಗಳು, ಅವರ ಜೀವನದ ತತ್ವಾದರ್ಶಗಳು ಜೀವಂತವಾಗಿದ್ದು, ನಮ್ಮಗೆಲ್ಲಾ ಮಾರ್ಗದರ್ಶಕವಾಗಿವೆ. ಮಕ್ಕಳ ಬಗ್ಗೆ ಹೆಚ್ಚು ಪ್ರೀತಿಯನ್ನು ಇಟ್ಟುಕೊಂಡಿದ್ದ ಅವರ ಸವಿ ನೆನಪಿಗಾಗಿ ಅಂಗನವಾಡಿ ಮಕ್ಕಳಿಗೆ ಕಲಾಂ ಅವರ ಜೀವನ ಚರಿತ್ರೆಯ ಪುಸ್ತಕಗಳನ್ನು ದೇಣಿಗೆ ನೀಡಿದ್ದು ಸ್ತುತ್ಯಾರ್ಹವಾಗಿದೆ ಎಂದರು.
ಗ್ರಾ.ಪಂ ಅಧ್ಯಕ್ಷರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯು ನಮಗೆ ಮಾರ್ಗದರ್ಶಕವಾಗಿದೆ. ಅವರ ಮೌಲ್ಯಯುತ ವಾಕ್ಯಗಳನ್ನು ಇಂದಿನ ಯುವಕರು ಅಳವಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನರ ಮಾತನಾಡಿದರು.
ಎಸ್.ಎಸ್.ಎಲ್.ಸಿಯಲ್ಲಿ ಶೇ. 98ರಷ್ಟು ಅಂಕ ಗಳಿಸಿದ ವಿದ್ಯಾರ್ಥಿ ಪ್ರಕಾಶ ಪಾಪನಾಶಿ ಹಾಗೂ 14 ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಜಿ.ಪಂ ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ಗ್ರಾ.ಪಂ ಸದಸ್ಯರಾದ ಪೀರಸಾಬ ನದಾಫ್, ಫಕ್ಕೀರಮ್ಮ ಬೇಲೇರಿ, ರಾಚಪ್ಪ ನಾಲ್ವಡದ, ಮರಿಯಪ್ಪ ವಡ್ಡರ, ಅಂದಾನಯ್ಯ ಮುನವಳ್ಳಿಮಠ, ಹುಸೇನಸಾಬ ಕದಾಂಪೂರ, ಬಸವರಾಜ ಪಾಪನಾಶಿ ವೇದಿಕೆಯಲ್ಲಿದ್ದರು. ಪಿ.ಡಿ.ಒ ಅಮೀರನಾಯಕ ಸ್ವಾಗತಿಸಿದರು. ನಮಿತಾ ವಿನೋದ ಕಲಾಲ ನಿರೂಪಿಸಿದರು. ಮಲ್ಲಮ್ಮ ಯಲಿಶಿರುಂದ ವಂದಿಸಿದರು.
ಫೆಡರೇಶನ್‌ನ ಸಂಸ್ಥಾಪಕ ಅಮೃತ ಮಂಟೂರು ಮಾತನಾಡಿ, ವಿಶ್ವ ಕಂಡ ಅಪ್ರತಿಮ ನಾಯಕರಾಗಿದ್ದ ಕಲಾಂ ಅವರ ಶೈಕ್ಷಣಿಕ, ಬೌದ್ಧಿಕ ಮತ್ತು ಧಾರ್ಮಿಕ ತತ್ವ ಸಿದ್ಧಾಂತಗಳು ಇಂದಿನ ಯುವಕರಿಗೆ ಆದರ್ಶಗಳಾಗಿವೆ. ತ್ಯಾಗ ಮನೋಭಾವನೆಯುಳ್ಳ ಇವರು ಎಂದೆಂದಿಗೂ ಚಿರಸ್ಮರಣೀಯರು ಎಂದರು.


