ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವ ನಟ ಕಮಲ್ ಹಾಸನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಕಮಲ್ ನಟನೆಯ ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿವೆ. ಹಲವು ಸಂಘಟನೆಗಳು, ವಾಣಿಜ್ಯ ಮಂಡಳಿ, ರಾಜಕೀಯ ಮುಖಂಡರು. ಚಿತ್ರರಂಗದ ನಟ, ನಟಿಯರು ಕಮಲ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಕಮಲ್ ಹಾಸನ್ ಮಾತ್ರ ಸುತಾರಾಂ ಕ್ಷಮೆ ಕೇಳಲು ನಿರಾಕರಿಸಿದ್ದಾರೆ.
ಇಂದು (ಮೇ 30) ಚೆನ್ನೈನಲ್ಲಿ ಈ ಬಗ್ಗೆ ಮಾತನಾಡಿರುವ ಕಮಲ್ ಹಾಸನ್, ‘ನಾನು ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ. ‘ನನ್ನಿಂದ ತಪ್ಪು ಆಗಿದ್ದರೆ ಮಾತ್ರ ಕ್ಷಮೆಯಾಚಿಸುವೆ, ನನ್ನಿಂದ ತಪ್ಪು ಆಗಿಲ್ಲ, ಹಾಗಾಗಿ ನಾನು ಕ್ಷಮೆ ಕೇಳಲ್ಲ, ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ, ನಾನು ಕಾನೂನು & ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ’ ಎಂದು ಹೇಳಿದ್ದಾರೆ.
ಕೇರಳದಲ್ಲಿ ಇದೇ ವಿವಾದದ ಬಗ್ಗೆ ಮಾತನಾಡಿದ್ದ ಕಮಲ್ ಹಾಸನ್, ‘ಭಾಷೆಯ ಬಗ್ಗೆ ಆಳವಾದ ಚರ್ಚೆ ಮಾಡುವ ಅರ್ಹತೆ ನನ್ನನ್ನೂ ಸೇರಿದಂತೆ ಯಾವ ರಾಜಕಾರಣಿಗಳಿಗೂ ಇಲ್ಲ. ಆದರೆ ನಾನು ಕನ್ನಡದ ಮೇಲಿನ ಪ್ರೀತಿಯಿಂದಲೇ ಆ ಮಾತನ್ನು ಹೇಳಿದ್ದೆ. ಪ್ರೀತಿಯಿಂದ ಆಡಿದ ಮಾತಿಗೆ ಕ್ಷಮೆ ಕೇಳಲು ಆಗದು, ಸ್ಪಷ್ಟನೆ ಮಾತ್ರವೇ ನೀಡಬಹುದು’ ಎಂದಿದ್ದರು. ಈಗ ಮತ್ತೊಮ್ಮೆ ತಾವು ಕ್ಷಮೆ ಕೇಳುವುದಿಲ್ಲ ಎಂದಿದ್ದರು. ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು ಯಾವುದೇ ಒತ್ತಡಕ್ಕೆ ಮಣಿದು ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.



