ಕನ್ನಡ ಭಾಷೆಯ ಬಗ್ಗೆ ನಟ ಕಮಲ್ ಹಾಸನ್ ಆಡಿರುವ ಮಾತು ಆಕ್ರೋಶಕ್ಕೆ ಕಾರಣವಾಗಿದೆ. ಕಮಲ್ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕಮಲ್ ನಟನೆಯ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ತಡೆ ಮಾಡೋದಾಗಿ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ ಕಮಲ್ ಹೇಳಿಕೆಯನ್ನು ಹಲವು ನಟ, ನಟಿಯರು, ರಾಜಕೀಯ ಮುಖಂಡರು ವಿರೋಧಿಸಿದ್ದಾರೆ. ಇದೀಗ ಕರವೇ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಯಾವುದಾದರೂ ಚಿತ್ರಮಂದಿರಗಳು ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದಲ್ಲಿ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಮಲ್ ಹಾಸನ್ ಅವರು ಕ್ಷಮೆ ಕೇಳದೇ ಇದ್ದರೆ ಅವರ ಯಾವ ಸಿನಿಮಾಗಳೂ ಸಹ ಕರ್ನಾಟಕದಲ್ಲಿ ಬಿಡುಗಡೆ ಆಗಲು ಬಿಡುವುದಿಲ್ಲ. ಕನ್ನಡದ ಭಗ್ಗೆ ಯಾರೇ ಮಾತಾಡಿದರೂ ಕನ್ನಡ ರಕ್ಷಣಾ ವೇದಿಕೆ ಮಾತ್ರ ಬಿಡಲ್ಲ. ನಮ್ಮ ಮೇಲೆ ಇನ್ನೂ ಕೇಸ್ ಹಾಕಿದರೂ ಸಮಸ್ಯೆ ಇಲ್ಲ. ಕಮಲ್ ಹಾಸನ್ ಕ್ಷಮೆ ಕೇಳದೇ ಇದ್ದರೆ ಅವರ ಸಿನಿಮಾ ಬಿಡುಗಡೆ ಆಗಲ್ಲ. ಐದನೇ ತಾರೀಖು ಕಮಲ್ ಹಾಸನ್ ಸಿನಿಮಾ ಇಲ್ಲಿ ರಿಲೀಸ್ ಮಾಡಲು ಬಿಡಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಯಾಕೋ ಕನ್ನಡದ ಬಗ್ಗೆ ಮಾತುಗಳು ಜಾಸ್ತಿಯಾಗಿದೆ. ಆಗಾಗ ತಮಿಳುನಾಡಿಗೂ ನಮಗೂ ಕಾವೇರಿ ವಿಚಾರಕ್ಕೆ ಸಂಘರ್ಷ ನಡೀತಾ ಇತ್ತು. ಉತ್ತರದ ಹಿಂದಿ ಬಾಷೆಯ ಒತ್ತಡ ಕನ್ನಡದ ಮೇಲೆ ಬೀಳುತ್ತಿದೆ. ಕಮಲ್ ಹಾಸನ್ ತಮಿಳಿನ ದೊಡ್ಡ ಮಹಾ ನಟ. ಅವ್ರ ಮೇಲೆ ದೊಡ್ಡ ಅಭಿಮಾನ ನಮಗೂ ಇತ್ತು. ಆದರೆ ಮೊನ್ನೆ ಸಿನಿಮಾ ಕಾರ್ಯಾಕ್ರಮದಲ್ಲಿ ಕನ್ನಡ ವಿರೋಧಿ ಹೇಳಿಕೆ ಕೊಟ್ಟಿದ್ದಾರೆ. ಅವರು ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿದ್ದಾರೆ. ಯಾವ ಆಧಾರದ ಮೇಲೆ ಹೇಳಿದ್ದಾರೊ ಗೊತ್ತಿಲ್ಲ. ಯಾವ ಶಾಸನಗಳನ್ನು ನೋಡದೆ ತಮಿಳರನ್ನ ಓಲೈಸುವ ಹೇಳಿಕೆ ಕೊಟ್ಟಿದ್ದಾರೆ. ಅವರ ಭಾಷೆ ಭಗ್ಗೆ ಅವರು ಏನು ಬೇಕಾದರೂ ಮಾತನಾಡಲಿ, ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಬೇರೆ ಭಾಷೆ ಮಾತನಾಡುವಾಗ ಕನಿಷ್ಟ ಜ್ಞಾನ ಇರ್ಬೇಕಿತ್ತು. ಅವರು ಆ ಮಾತನ್ನ ಹೇಳುವಾಗ ಅಲ್ಲಿ ಶಿವರಾಜ್ ಕುಮಾರ್ ಇದ್ದರು. ಅವರು ಅಲ್ಲಿಯೆ ಇದಕ್ಕೆ ವಿರೋಧಿಸಬೇಕಿತ್ತು. ಕನ್ನಡ ತಮಿಳಿನಿಂದ ಬಂದಿದ್ದು ಅಲ್ಲ, ಅದಕ್ಕೆ ಸ್ವಂತ ಲಿಪಿ ಇದೆ ಎಂದು ಹೇಳಬೇಕಿತ್ತು’ ಎಂದು ಹೇಳಿದ್ದಾರೆ.
ಸಿನಿಮಾ ನಿಷೇಧ ಮಾಡುವುದು ಅತಿಯಾಯ್ತು ಎಂಬ ರಮ್ಯಾ ಮಾತಿಗೆ ಪ್ರತಿಕ್ರಿಯೆ ನೀಡಿರುವ ನಾರಾಯಣಗೌಡ, ‘ಸಿನಿಮಾ ನಟ-ನಟಿಯರು ವಿಶ್ವಮಾನವರು, ಭಾಷೆ ವಿಚಾರಕ್ಕೆ ಮಾತಾಡೋರು ಸಿನಿಮಾ ರಂಗದಲ್ಲಿಲ್ಲ, ರಮ್ಯಾ ಅವರೇ ನೀವು ಉಪದೇಶ ಮಾಡೋದನ್ನ ಬಿಡಿ, ಇಲ್ಲಿ ಕನ್ನಡ ಭಾಷೆಗಿಂತ ದೊಡ್ಡವರು ಯಾರೂ ಇಲ್ಲ, ನೀವು ಬುದ್ಧಿ ಹೇಳೋದಿದ್ರೆ ಕಮಲ್ ಹಾಸನ್ಗೆ ಹೇಳಿ, ಕ್ಷಮಿಸಿಬಿಡಿ ಎಂದು ಕನ್ನಡಿಗರಿಗೆ ಹೇಳಲು ಬರಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.