ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಸೇರಿ ಮಲೆನಾಡು ಭಾಗದಲ್ಲಿ ದಶಕಗಳಿಂದ ಕಾಡುತ್ತಿದ್ದ ನಕ್ಸಲ್ವಾದ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸರ್ಕಾರದ ಸೂಚನೆಯಂತೆ ಶರಣಾಗತಿಗೆ ಆರು ಮಂದಿ ನಕ್ಸಲರು ನಿರ್ಧಾರ ಮಾಡಿದ್ದಾರೆ.
ಕರ್ನಾಟಕದಲ್ಲಿ 6 ಮಂದಿ ನಕ್ಸಲರು ಬಂದೂಕು ಕೆಳಗಿರಿಸಿ, ಸರ್ಕಾರದ ಮುಂದೆ ಶರಣಾಗಲು ಮುಂದಾಗಿದ್ದಾರೆ. ಮೋಸ್ಟ್ ವಾಂಟೆಡ್ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಸೇರಿದಂತೆ ಒಟ್ಟೂ 6 ಮಂದಿ ನಕ್ಸಲರು ಸರ್ಕಾರದ ಮುಂದೆ ಶರಣಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಮುಖ್ಯವಾಹಿನಿಗೆ ಬರಲು ಒಪ್ಪಿದ್ದು, ಸರ್ಕಾರ ಕೂಡ ಸಮ್ಮತಿ ಸೂಚಿಸಿದೆ. ಬೇಕಿರುವ ತಯಾರಿಗಳನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ.
ಇನ್ನೂ ಶರಣಾಗುವ ಮುನ್ನ ನಕ್ಸಲರು ಸರ್ಕಾರಕ್ಕೆ ಅಂದರೆ ಶಾಂತಿ ನಾಗರಿಕರ ವೇದಿಕೆ ಮತ್ತು ನಕ್ಸಲ್ ಪುನರ್ವಸತಿ ಸಮಿತಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ, ತಮ್ಮ ಮೇಲಿನ ಸುಳ್ಳು ಕೇಸ್ಗಳನ್ನು ಖುಲಾಸೆಗೊಳಿಸುವುದು ಮತ್ತು ವಿಕ್ರಂಗೌಡ ಎನ್ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದಾರೆ.