ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕನ್ನಡ ಎಂಬುದು ಬರಿಯ ಭಾಷೆಯಲ್ಲ. ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಸಾರುವ ಶಕ್ತಿಯಾಗಿದೆ. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ, ಸ್ವಾಭಿಮಾನ ಅಂತರ್ಗತವಾಗಿರಬೇಕು ಎಂದು ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆ ನಂ.4 ರ ಹತ್ತಿರವಿರುವ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಭಾಂಗಣದಲ್ಲಿ ಮಂಗಳವಾರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 70ನೇ ರಾಜ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕನ್ನಡ ಹೃದಯದ ಭಾಷೆಯಾಗಿದ್ದು, ಅದು ನಮ್ಮ ಉಸಿರಾಗಬೇಕು. ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಹಿರಿಯರ ವಾಣಿಯಂತೆ ಕನ್ನಡದ ನೆಲ, ಜಲ, ಭಾಷೆಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಆತ್ಮಾಭಿಮಾನ ಬೆಳೆಯಬೇಕು. ಕೇವಲ ಬಾಯಿ ಮಾತಿನಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ. 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡು-ನುಡಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವಲ್ಲಿ ನುಡಿಗಿಂತ ನಡೆ ಮುಖ್ಯವಾಗಿದೆ. ರಾಜ್ಯೋತ್ಸವ ಆಚರಣೆ ನಿತ್ಯೋತ್ಸವವಾಗಬೇಕು ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ, ಅನ್ಯಭಾಷಿಕರ ಪ್ರಭಾವದಿಂದ ಇಂದು ಕನ್ನಡ ನೆಲ, ಜಲ, ಭಾಷೆಗೆ ಅನ್ಯಭಾಷಿಕರಿಂದ ತೊಂದರೆ ಉಂಟಾಗುತ್ತಿದೆ. ಗಡಿ ಭಾಗಗಳಲ್ಲಂತೂ ಕನ್ನಡಕ್ಕೆ ಕುತ್ತು ಎದುರಾಗಿದೆ. ಕನ್ನಡ ನಮ್ಮ ನೆಲದ ಭಾಷೆ. ಅದನ್ನು ಉಳಿಸಿ-ಬೆಳೆಸುವುದು ನಮ್ಮ ಜವಾಬ್ದಾರಿ. ಬೇರೆ ಭಾಷೆಯ ಜ್ಞಾನ ಬೇಕು, ಆದರೆ ಕನ್ನಡ ಉಸಿರಾಗಬೇಕು. ಕನ್ನಡ ಉಳಿದರೆ ನಮ್ಮ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ ಎಂದರು.
ವಿದ್ಯಾಪೀಠ ಪಾಠಶಾಲೆಯ ಪ್ರಾಚಾರ್ಯೆ ಪ್ರಗತಿ ತಾವರೆ ಉಪನ್ಯಾಸ ನೀಡಿ, ಕನ್ನಡ ಭಾಷೆ, ನೆಲ, ಜಲದ ಹಿರಿಮೆ-ಗರಿಮೆಯ ಬಗ್ಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಲಲಿತಕ್ಕಾ ಕೆರಿಮಣಿ ವಹಿಸಿದ್ದರು. ನೀಲಕ್ಕ ಬೂದಿಹಾಳ, ಪ್ರತಿಮಾ ಮಹಾಜನಶೆಟ್ಟರ, ಲತಾ ತಟ್ಟಿ, ನಿರ್ಮಲಾ ಅರಳಿ, ಗಂಗಾಧರ ಮೆಣಸಿನಕಾಯಿ ಸೇರಿ ಅನೇಕರಿದ್ದರು. ಅಶ್ವಿನಿ ಅಂಕಲಕೋಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಾರ್ವತಿ ಕಳ್ಳಿಮಠ ಪ್ರಾರ್ಥಿಸಿದರು. ನಿರ್ಮಲಾ ಅರಳಿ ಸ್ವಾಗತಿಸಿದರು, ಡಿ.ಎಫ್. ಪಾಟೀಲ ನಿರೂಪಿಸಿದರು. ರತ್ನಾ ಕರ್ಕಿ ವಂದಿಸಿದರು.
ಮಕ್ಕಳಿಗೆ ಬಾಲ್ಯದಲ್ಲಿಯೇ ಕನ್ನಡದ ಬಗ್ಗೆ ಗೌರವಾಭಿಮಾನ ಮೂಡಿಸಬೇಕು. ಕನ್ನಡ ನಮ್ಮ ಉಸಿರಾಗಬೇಕು. ಕನ್ನಡವನ್ನು ಉಳಿಸಿ-ಬೆಳೆಸಬೇಕೆನ್ನುವ ಎಲ್ಲರ ನಿರ್ಧಾರ ತಮ್ಮ ತಮ್ಮ ಮನೆಗಳಿಂದಲೇ ಆರಂಭವಾಗಬೇಕು. ಅಂದಾಗ ಮಾತ್ರ ಕನ್ನಡಕ್ಕೆ ಒಂದು ಬೆಲೆ ಬರಲು ಸಾಧ್ಯವಾಗುತ್ತದೆ. ಕನ್ನಡ ಮಾಧ್ಯಮದ ಬಗ್ಗೆ ನಮ್ಮಲ್ಲಿರುವ ಕೀಳರಿಮೆ ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.


