ಸಾಯಿಕುಮಾರ್ ನಟನೆಯ ‘ಅಗ್ನಿ ಐಪಿಎಸ್’ ಚಿತ್ರ ಸೇರಿದಂತೆ ಇನ್ನೂ ಹಲವು ಹಿಟ್ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ಎಸ್ ಎಸ್. ಡೇವಿಡ್ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಡೇವಿಡ್ ನಿಧನರಾಗಿದ್ದು ಇದೀಗ ಅವರ ಶವ ಅನಾಥವಾಗಿದೆ. ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ನಿರಾಕರಿಸಿದ್ದಾರೆ.
ನಿನ್ನೆ(ಆಗಸ್ಟ್ 31) ಮೆಡಿಕಲ್ ಶಾಪ್‌ಗೆ ತೆರಳಿ ವಾಪಸ್ಸಾಗುವ ವೇಳೆ ಡೇವಿಡ್ ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಆರ್‌ಆರ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ನಿನ್ನೆ ಸಂಜೆ 7.30ರ ಸುಮಾರಿಗೆ ಡೇವಿಡ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸದ್ಯ ಡೇವಿಡ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಾರ್ಥೀವ ಶರೀರ ಇರಿಸಲಾಗಿದೆ. ಡೇವಿಡ್ ಅವರಿಗೆ ಮದುವೆ ಆಗಿರಲಿಲ್ಲ. ಅವರ ಸೋದರ ಸಂಬಂಧಿ ಉಡುಪಿಯ ಕಾಪುವಿನಲ್ಲಿ ವಾಸವಾಗಿದ್ದಾರೆ. ಸಹೋದರನ ಅಂತ್ಯಕ್ರಿಯೆಗೆ ತಾವು ಬರೋಕೆ ಸಾಧ್ಯವಿಲ್ಲ, ಬೆಂಗಳೂರಿನಲ್ಲೇ ಅಂತ್ಯಕ್ರಿಯೆ ನಡೆಸಿ ಎಂದು ಸಹೋದರಿ ತಿಳಿಸಿದ್ದಾರೆ ಎಂದು ನಟ ಥ್ರಿಲ್ಲರ್ ಮಂಜು ಹೇಳಿದ್ದಾರೆ.
“ನನ್ನ ಸುಮಾರು ಸಿನಿಮಾಗಳಿಗೆ ಡೇವಿಡ್ ಕೆಲಸ ಮಾಡಿದ್ದಾರೆ. ‘ಪೊಲೀಸ್ ಸ್ಟೋರಿ’ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದಿದ್ದರು. ‘ಅಗ್ನಿ ಐಪಿಎಸ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ರು. ‘ಓಂ ನಮಃ ಶಿವಾಯ’ ಚಿತ್ರದಲ್ಲಿ ಆಕ್ಟಿಂಗ್ ಮಾಡಿದ್ರು. ಕಥೆ ಮಾಡಿದ್ರು. ಅವರ ನಿರ್ದೇಶನದಲ್ಲಿ ‘ಪೊಲೀಸ್ ಡಾಗ್’, ‘ಸುಪಾರಿ’ ಚಿತ್ರಗಳಲ್ಲಿ ನಾನು ನಟಿಸಿದ್ದೆ. ‘ಪೊಲೀಸ್ ಸ್ಟೋರಿ- 2’ ಚಿತ್ರಕ್ಕೂ ಕಥೆ ಬರೆದಿದ್ದರು. ಬಳಿಕ ಬಹಳ ವರ್ಷ ಗ್ಯಾಪ್ ಆಗಿತ್ತು. 2010ರ ಬಳಿಕ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. 3 ವರ್ಷದ ಹಿಂದೆ ಒಮ್ಮೆ ಭೇಟಿ ಆಗಿದ್ದೆ” ಎಂದು ಥ್ರಿಲ್ಲರ್ ಮಂಜು ಹೇಳಿದ್ದಾರೆ.
“ಡೇವಿಡ್ ಪದೇ ಪದೆ ಫೋನ್ ನಂಬರ್ ಬದಲಿಸುತ್ತಿದ್ದರು. ಹಾಗಾಗಿ ಸಂಪರ್ಕ ಕಷ್ಟವಾಗುತ್ತಿತ್ತು. ನಾವು ಆಸ್ಪತ್ರೆ ಬಳಿ ಹೋಗಿದ್ದೇವು. ಡೇವಿಡ್ ಸಹೋದರಿ ಪೊಲೀಸರಿಗೆ ಒಂದು ವೀಡಿಯೋ ಕಳುಹಿಸಿದ್ದಾರೆ. ನಾವು ಬರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಮನೋಜ್ ಎಂಬುವವರಿಗೆ ಸೂಚಿಸಿದ್ದೇನೆ, ಅವ್ರು ಅಂತಿಮ ವಿಧಾನ ನೋಡಿಕೊಳ್ಳುತ್ತಾರೆ ಎಂದಿದ್ದಾರಂತೆ. ಕಾನೂನು ಪ್ರಕ್ರಿಯೆ ಬಳಿಕ ಪಾರ್ಥೀವ ಶರೀರ ಸಿಗುತ್ತದೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಬಹುದು” ಎಂದು ಥ್ರಿಲ್ಲರ್ ಮಂಜು ತಿಳಿಸಿದ್ದಾರೆ.


