ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಭಾಷೆಗೆ ತನ್ನದೇ ಆದ ಅಸ್ಮಿತೆಯಿದ್ದು, ಅದು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಎಲ್ಲರೂ ಕನ್ನಡತನವನ್ನು ಬಳಸಿಕೊಂಡಾಗ ಮಾತ್ರ ಕನ್ನಡವನ್ನು ಕಾಪಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರು, ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶೋಭಾ ಬಸವರಾಜ ಮೇಟಿ ಹೇಳಿದರು.
ನಗರದ ಮುಳಗುಂದ ನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದ ಶಿವಾನುಭವ ಸಮಿತಿ ಜಿಲ್ಲಾ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಶ್ರೀಮಠದ 341ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ನಿಮಿತ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಿವಾನುಭವ ಸಮಿತಿ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿ, ಕನ್ನಡವು ನಮ್ಮ ಬಾಂಧವ್ಯ, ಹೆಮ್ಮೆ ಮತ್ತು ಅಸ್ತಿತ್ವದ ಗುರುತಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ನಾಡು ಸಾಕಷ್ಟು ರಾಜಮನೆತನಗಳನ್ನು, ಅರಸರನ್ನು ಹೊಂದಿದಂತೆ ಅನೇಕ ಕವಿ, ಕಲಾವಿದರನ್ನು ಹೊಂದಿರುವ ಪುಣ್ಯಭೂಮಿಯಾಗಿದೆ ಎಂದು ಹೇಳಿದರು.
ಮಹಿಳಾ ಕವಿಗೋಷ್ಠಿಯಲ್ಲಿ ಪ್ರೊ. ಶಕುಂತಲಾ ಸಿಂಧೂರ, ಡಾ. ರಶ್ಮಿ ಅಂಗಡಿ, ಡಾ. ಪದ್ಮಾ ಕಬಾಡಿ, ಜ್ಯೋತಿ ಎಂ. ಲೋಣಿ, ನೀಲಮ್ಮ ಅಂಗಡಿ, ರತ್ನಾ ಬದಿ, ಶಾರದಾ ಬಾಣದ, ಗೀತಾ ಹೂಗಾರ ಅವರು ಸ್ವರಚಿತ ಕವಿತೆಗಳನ್ನು ಮಂಡಿಸಿದರು.
ಮಂಗಳಾ ಯಾನಮಶೆಟ್ಟಿ, ಎಂ.ವಿ. ಕುಂದ್ರಾಳಹಿರೇಮಠ, ಆದ್ಯಾ, ಮನಸ್ವಿ ಅವರು ಕನ್ನಡ ನಾಡು-ನುಡಿ ಕುರಿತಾದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಗಣ್ಯ ವ್ಯಾಪಾರಸ್ಥರಾದ ವಿನೋದ್ ಕವಲನಾಯಕ್, ಕುರಟ್ಟಿ ದಂಪತಿಗಳು ವೇದಿಕೆಯಲ್ಲಿದ್ದರು. ಗೀತಾ ಹೂಗಾರ ಪ್ರಾರ್ಥಿಸಿದರು. ಸಮಿತಿಯ ಕಾರ್ಯದರ್ಶಿ ಪ್ರಭುಗೌಡ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಬಿ. ಪಾಟೀಲ ವಂದಿಸಿದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಿಶ್ವೇಶ್ವರಯ್ಯ ಪ್ರಶಸ್ತಿಗೆ ಭಾಜನರಾದ ಸಾಹಿತಿ ಡಾ. ರಾಜೇಂದ್ರ ಗಡಾದರನ್ನು, ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕವಯಿತ್ರಿ ಶೋಭಾ ಬಸವರಾಜ ಮೇಟಿ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯರಾದ ಪ್ರೊ. ಕೆ.ಎಚ್. ಬೇಲೂರು, ಬಿ.ಎಂ. ಬಿಳೆಯಲಿ, ಸುಶೀಲಾ ಕೋಟಿ, ನಿಂಗಪ್ಪ ಬಳಿಗಾರ, ಎಲ್.ಎಸ್. ನೀಲಗುಂದ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ನಿಡುಗುಂದಿ, ಯಶೋಧಾ ಗಿಡ್ನಂದಿ ಮುಂತಾದವರು ಪಾಲ್ಗೊಂಡಿದ್ದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಧರ್ಮದರ್ಶಿಗಳಾದ ವೇ.ಮೂ. ಶ್ರೀಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಿಸುವುದು ಕನ್ನಡ ಅಭಿಮಾನದ ಸಂಕೇತ. ಕನ್ನಡ ಭಾಷೆಯು ಕರ್ನಾಟಕದ ಅಧಿಕೃತ ಭಾಷೆಯಾಗಿದ್ದು, ಇದು ಶ್ರೀಮಂತ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ ಎಂದರು.


