ವಿಜಯಸಾಕ್ಷಿ ಸುದ್ದಿ, ಗದಗ : ಮಂಡ್ಯದಲ್ಲಿ ಡಿಸೆಂಬರ್‌ನಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥವು ಗದಗ ನಗರಕ್ಕೆ ಶನಿವಾರ ಸಾಯಂಕಾಲ ಆಗಮಿಸಿತು.
ನಗರದ ಚನ್ನಮ್ಮಾ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡಪರ ಸಂಘಟನೆ ಬರಮಾಡಿಕೊಂಡು ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಡಿಸೆಂಬರ್ 21ರಿಂದ 23ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಂಡ್ಯದಲ್ಲಿ ಜರುಗಲಿದೆ. ನಾವೆಲ್ಲರೂ ಕನ್ನಡ ನೆಲ-ಜಲ, ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸೋಣ. ಕನ್ನಡ ಭಾಷೆ ಬೆಳೆಸುವಲ್ಲಿ ಪ್ರತಿಯೊಬ್ಬರೂ ಕಂಕಣಬದ್ಧರಾಗಿ ನಿಲ್ಲಬೇಕು. ಕನ್ನಡ ನಾಡು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮವು ಎಲ್ಲರಲ್ಲೂ ಸಂತೋಷ ಉಂಟುಮಾಡಿದೆ ಎಂದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದ ಪಾಟೀಲ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕಾ ಅಧಿಕಾರಿ ಬಸವರಾಜ ಬಳ್ಳಾರಿ ಮತ್ತಿತರು ಹಾಜರಿದ್ದು, ಕನ್ನಡ ರಥವನ್ನು ಸ್ವಾಗತಿಸಿ ಪುಷ್ಪಾರ್ಚನೆ ಮಾಡಿದರು. ಈ ವೇಳೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕನ್ನಡಾಬಿಮಾನಿಗಳು ಇದ್ದರು.
ರಥವು ಮಂಡ್ಯ ಜಿಲ್ಲೆಯ ವಿಶೇಷತೆ ಸಾರುವ ರಥ ಕನ್ನಡ ನುಡಿ ಕಲಿಸುವ ತಾಯಿ ಭುವನೇಶ್ವರಿ, ಕಾವೇರಿ ಮಾತೆ, ಉಳುಮೆ ಮಾಡಲು ಸಿದ್ಧವಿರುವ ಎತ್ತುಗಳು ಮತ್ತು ರೈತ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯರ ಸುಂದರ ಆಕೃತಿಗಳು ಜಿಲ್ಲೆಯ ಬಗ್ಗೆ ಚಿತ್ರಣ, ಜ್ಞಾನಪೀಠ ಪುರಸ್ಕೃತರ ಬಾವಚಿತ್ರಗಳು ರಥದ ವಿಶೇಷತೆ ಹೆಚ್ಚಿಸಿತ್ತು.