ವಿಜಯಸಾಕ್ಷಿ ಸುದ್ದಿ, ಗದಗ : ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಗದಗ ಜಿಲ್ಲೆಯಲ್ಲಿ ಸೆ. 28 ಹಾಗೂ 29ರಂದು ಸಂಚರಿಸಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ತಿಳಿಸಿದ್ದಾರೆ.
ಸೆ. 28ರಂದು ಬೆಳಿಗ್ಗೆ 9 ಗಂಟೆಗೆ ಲಕ್ಷ್ಮೇಶ್ವರ, ಮಧ್ಯಾಹ್ನ 12 ಗಂಟೆಗೆ ಶಿರಹಟ್ಟಿ, ಮಧ್ಯಾನ್ಯ 3 ಗಂಟೆಗೆ ಮುಂಡರಗಿಯಲ್ಲಿ ಸಂಚರಿಸಿ, ಸಾಯಂಕಾಲ 4 ಗಂಟೆಗೆ ಗದುಗಿಗೆ ಆಗಮಿಸಲಿದೆ. ಸೆ.29ರಂದು ಗದುಗಿನಿಂದ ಹೊರಟು ಬೆಳಿಗ್ಗೆ 11 ಗಂಟೆಗೆ ಗಜೇಂದ್ರಗಡ, ಮಧ್ಯಾಹ್ನ 1 ಗಂಟೆಗೆ ರೋಣ ಹಾಗೂ ಸಂಜೆ 5 ಗಂಟೆಗೆ ನರಗುಂದಕ್ಕೆ ಆಗಮಿಸಲಿದೆ.
ಈ ರಥಯಾತ್ರೆಯಲ್ಲಿ ಜನಪ್ರತಿನಿಧಿಗಳು, ಸಾಹಿತಿಗಳು, ಬರಹಗಾರರು, ನಾಡು-ನುಡಿ ಚಿಂತಕರು, ಹೋರಾಟಗಾರರು, ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲೂಕು, ಹೋಬಳಿ ಘಟಕಗಳ ಪದಾಧಿಕಾರಿಗಳು, ಪರಿಷತ್ತಿನ ಸದಸ್ಯರು, ಕನ್ನಡಪರ ಸಂಘಟನೆಗಳು, ರೈತ, ಕಾರ್ಮಿಕ ಸಂಘಟನೆಗಳು, ವಿದ್ಯಾಸಂಸ್ಥೆಗಳು, ರೋಟರಿ, ಲಯನ್ಸ್ ಮುಂತಾದ ಸಂಘ ಸಂಸ್ಥೆಗಳು, ಎನ್.ಸಿ.ಸಿ., ಎನ್.ಎಸ್.ಎಸ್. ರೆಡ್ ಕ್ರಾಸ್ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಮನವಿ ಮಾಡಿದ್ದಾರೆ.
ಪ್ರತಿ ತಾಲೂಕುಗಳಿಗೆ ಕನ್ನಡ ರಥ ಆಗಮಿಸಿದ ಸಂದರ್ಭದಲ್ಲಿ ಆಯಾ ತಾಲೂಕುಗಳ ತಹಸೀಲ್ದಾರರ ನೇತೃತ್ವದಲ್ಲಿ ರಥಯಾತ್ರೆ ಜರುಗಲಿದೆ. ತಾಲೂಕಾ ಕಸಾಪ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು, ಸಾಹಿತಿ-ಕಲಾವಿದರು, ಕನ್ನಡಪರ ಕಾರ್ಯಕರ್ತರು, ಆಜೀವ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸುವಂತೆ ವಿವೇಕಾನಂದಗೌಡ ಪಾಟೀಲ ಮನವಿ ಮಾಡಿದ್ದಾರೆ.