HomeGadag Newsಕನ್ನಡ ಭಾಷೆಗೆ ಒಂದು ಗತ್ತಿದೆ, ತಾಕತ್ತಿದೆ

ಕನ್ನಡ ಭಾಷೆಗೆ ಒಂದು ಗತ್ತಿದೆ, ತಾಕತ್ತಿದೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜಗತ್ತಿನ ಎಲ್ಲ ಭಾಷೆಗಳಿಗಿಂತ ಕನ್ನಡ ಭಾಷೆಗೊಂದು ಗತ್ತಿದೆ, ತಾಕತ್ತಿದೆ. ಅದನ್ನು ಬಲ್ಲವರೇ ಬಲ್ಲರು. ಕನ್ನಡ ಭಾಷೆಗಿರುವ ತಾಕತ್ತೇ ನಮಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಇಷ್ಟೊಂದು ಜ್ಞಾನಪೀಠ ಪ್ರಶಸ್ತಿಗಳು ದೇಶದ ಬೇರಾವ ಭಾಷೆಗೂ ದೊರಕದೆ ಇರುವುದೇ ನಮ್ಮ ಕನ್ನಡ ಭಾಷೆಯ ತಾಕತ್ತು ಎಂದು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದಲ್ಲಿ ನಡೆದ ಗಜೇಂದ್ರಗಡ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಮತ್ತು ಶ್ರೀ ಗುರು ಕುಮಾರೇಶ್ವರರ ಪುಣ್ಯ ಸ್ಮರಣೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕನ್ನಡವನ್ನು ಉಚ್ಛಾರಣೆ ಮಾಡುವಾಗ ಬಹಳಷ್ಟು ಎಚ್ಚರಿಕೆಯಿಂದ ಬಳಸಬೇಕು. ಏಕೆಂದರೆ ಒಂದು ಶಬ್ದ ಆಚೀಚೆ ಆದರೂ ಅದರ ಅರ್ಥವೇ ಬೇರೆಯಾಗುತ್ತದೆ. ಆದ್ದರಿಂದ ಕನ್ನಡದ ಶಬ್ದಗಳನ್ನು ಜಾಗರೂಕತೆಯಿಂದ ಬಳಸಬೇಕು. ಅಲ್ಪಪ್ರಾಣ, ಮಹಾಪ್ರಾಣಗಳು ಕನ್ನಡವನ್ನು ಹೊರತುಪಡಿಸಿದರೆ ಬೇರೆ ಯಾವ ಭಾಷೆಯಲ್ಲಿಯೂ ಇಲ್ಲ. ಈ ಪ್ರಾಣಗಳನ್ನು ಸರಿಯಾಗಿ ಬಳಸದೆ ಹೋದರೆ ಮತ್ತೊಬ್ಬರ ಪ್ರಾಣವನ್ನೇ ತೆಗೆಯುವ ಸಂದರ್ಭ ಬರಬಹುದು ಎಂದು ಶ್ರೀಗಳು ವಿನೋದವಾಗಿ ಹೇಳಿದರು.

ಹರಪನಹಳ್ಳಿಯ ಭೀಮವ್ವ, ಲಕ್ಕುಂಡಿಯ ಅತ್ತಿಮಬ್ಬೆ, 12ನೇ ಶತಮಾನದ ವಚನಗಾರ್ತಿಯರು ಬರೆದ ಸಾಹಿತ್ಯವನ್ನು ನಾವೆಲ್ಲ ಓದುವ ರೂಢಿಯನ್ನು ಬೆಳೆಸಿಕೊಳ್ಳಬೇಕಿದೆ. ಅವುಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಸಾಹಿತ್ಯದ ರುಚಿಯನ್ನು ಬೆಳಸಿಕೊಳ್ಳಬೇಕು. ಕನ್ನಡ ಭಾಷೆಯ ಅಭಿಮಾನವನ್ನು ಬೆಳೆಸಿಕೊಳ್ಳಿ. ಇಂಗ್ಲೀಷ್‌ನ ವ್ಯಾಮೋಹಕ್ಕೆ ಬಿದ್ದು ಹಾಳಾಗಬೇಡಿ ಎಂದು ಕಿವಿ ಮಾತು ಹೇಳಿದರು.

ನಿಡಗುಂದಿಕೊಪ್ಪದ ಶ್ರೀಮಠದಲ್ಲಿ ಗಜೇಂದ್ರಗಡ ತಾಲೂಕಿನ ಮೊತ್ತಮೊದಲ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸುವ ಮೂಲಕ ಅಭಿನವ ಚನ್ನಬಸವ ಸ್ವಾಮೀಜಿ ಅತ್ಯಂತ ಸ್ತುತ್ಯವಾದ ಕಾರ್ಯ ಮಾಡಿದ್ದಾರೆ. ಅವರಿಗೆ ಎಲ್ಲ ರೀತಿಯ ಬೆಂಬಲ ನೀಡಿದ ಶಾಸಕ ಜಿ.ಎಸ್. ಪಾಟೀಲ, ಜಿಲ್ಲಾ ಮತ್ತು ತಾಲೂಕಾ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳನ್ನು ತಾವು ಹೃತ್ಪೂರ್ವಕವಾಗಿ ಅಭಿನಂದಿಸುವದಾಗಿ ಶ್ರೀಗಳು ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀ ಚನ್ನಬಸವೇಶ್ವರ ಚರಿತ್ರೆ ಮತ್ತು ಶಾಖಾ ಶಿವಯೋಗ ಮಂದಿರ ಪ್ರಭೆ, ಶಿವಯೋಗ ಚೇತನ ಗ್ರಂಥಗಳು ಬಿಡುಗಡೆಯಾದವು.

ಸಾನ್ನಿಧ್ಯ ವಹಿಸಿದ್ದ ಅಭಿನವ ಚನ್ನಬಸವ ಸ್ವಾಮೀಜಿ, ಅಂಕಲಗಿಯ ಅಡವಿಸಿದ್ದೇಶ್ವರ ಸ್ವಾಮೀಜಿ, ಸರ್ವಾಧ್ಯಕ್ಷ ಎಂ.ಎ. ಹಿರೇವಡೆಯರ, ಚಿಂತಕ ಬಿ.ಎ. ಕೆಂಚರೆಡ್ಡಿ ಆಶಯ ನುಡಿ ನುಡಿದರು. ಶಾಸಕ ಜಿ.ಎಸ್. ಪಾಟೀಲ, ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ, ಮಿಥುನ ಪಾಟೀಲ, ವಿ.ಬಿ. ಸೋಮನಕಟ್ಟಿಮಠ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಯಾರ ತಲೆಯಲ್ಲಿ ಒಳ್ಳೆಯ ವಿಚಾರಗಳು ಬರುತ್ತವೆಯೋ ಅವರಿಂದ ಉತ್ತಮ ಸಾಹಿತ್ಯ ರಚನೆ ಸಾಧ್ಯವಾಗುತ್ತದೆ. ನೀವು ಧಾರಾವಾಹಿಯ ಮೋಡಿಯಿಂದ ಹೊರಬಂದು ಸಾಹಿತ್ಯವನ್ನು ಓದುವ, ಬರೆಯುವ ಕಡೆಗೆ ಗಮನ ನೀಡಬೇಕು. ನಿಮ್ಮೆಲ್ಲರ ಶೈಕ್ಷಣಿಕ ಮಟ್ಟವನ್ನು ಎತ್ತರಿಸಬೇಕೆಂದು ಹಾನಗಲ್ಲ ಗುರು ಕುಮಾರೇಶ್ವರರು ನಾಡಿನಾದ್ಯಂತ ಅನೇಕ ಶೈಕ್ಷಣಿಕ ಹುಟ್ಟು ಹಾಕುವಲ್ಲಿ ಪ್ರೇರಣೆ ನೀಡಿದ್ದು ಇಂದಿನ ಸಾಹಿತ್ಯ ಸಮ್ಮೇಳನಕ್ಕೆ ನಾಂದಿ ಎಂದು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!