ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವದೆಲ್ಲೆಡೆ ಕರ್ನಾಟಕ ಹೆಸರಾಗಿದೆ, ಜೊತೆಗೆ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು. ಕನ್ನಡವನ್ನು ಪ್ರೀತಿಸಬೇಕು. ಯಾಕೆಂದರೆ ಕನ್ನಡ ನಮ್ಮ ನಾಡಿ ಮಿಡಿತ, ಹೃದಯದ ಬಡಿತ, ಮಾತೃ ಪ್ರೇಮದ ತುಡಿತ ಹಾಗೂ ಬದುಕಿನ ದುಡಿತ. ಕನ್ನಡ ಪ್ರೀತಿಯೇ ಕನ್ನಡಿಗರಿಗೆ ಶಾಶ್ವತ ಎಂದು ವಿಭೂತಿ ಪತ್ರಿಕೆಯ ಸಂಪಾದಕ, ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಲ್ಲಿನ ಚಿಕ್ಕಟ್ಟಿ ಶಾಲೆಯ ಸಭಾಭವನದಲ್ಲಿ, ಉತ್ತರ ಕರ್ನಾಟಕ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆ `ಕಲಾ ವಿಕಾಸ ಪರಿಷತ್’ ಗದಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ-2025 ಸಮಾರಂಭದಲ್ಲಿ `ಹೆಸರಾಯಿತು ಕರ್ನಾಟಕ’ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಡಾ. ಬಿಡಿನಹಾಳ ತಮ್ಮ ಬಾಲ್ಯದ ಬಡತನವನ್ನು ಬಿಚ್ಚಿಟ್ಟು, ಪಟ್ಟ ಪರಿಶ್ರಮ ಮತ್ತು ತಂದೆ ತಾಯಿಗಳ ದೂರದೃಷ್ಟಿಯನ್ನು ಸ್ಮರಿಸಿಕೊಂಡರು. ಅಧ್ಯಕ್ಷೀಯ ನ್ಮಡಿಗಳನ್ನಾಡಿದ ಭಾರತೀಯ ಶಿಕ್ಷಣ ಸಂಸ್ಥೆಯ ಪ್ರೊ. ಡಾ. ಎಸ್.ವಾಯ್. ಚಿಕ್ಕಟ್ಟಿ ಅವರು ಕಲಾವಿಕಾಸ ಪರಿಷತ್ತಿನೊಂದಿಗಿನ ಬಹುವರ್ಷಗಳ ಸಾಂಸ್ಕೃತಿಕ ನಂಟನ್ನು ನೆನಪು ಮಾಡಿಕೊಂಡರು. ಕಲಾವಿಕಾಸ ಪರಿಷತ್ ಸಂಸ್ಥಾಪಕ ಕಾರ್ಯಾಧ್ಯಕ್ಷ ಸಿ.ಕೆ.ಎಚ್. ಕಡಣಿ ಶಾಸ್ತಿçಗಳು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಅಧ್ಯಕ್ಷ ಪಂ. ಫಕೀರೇಶ್ವರ ಶಾಸ್ತ್ರಿಗಳು ಹಿರೇಮಠ (ಬೆಳ್ಳಟ್ಟಿ) ವೇದಿಕೆಯಲ್ಲಿ ಇದ್ದರು.
ಕನ್ನಡ ಉಪನ್ಯಾಸಕ, ಸಾಹಿತಿ ಶ್ರೀಶೈಲ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಹೇಮಾ ವೆಂಕಟೇಶ ಆಲ್ಕೋಡ ಇವರಿಂದ ಸುಗಮ ಸಂಗೀತ, ಗವಿಸಿದ್ಧಯ್ಯ ಹಳ್ಳಿಕೇರಿಮಠ ಇವರಿಂದ ಜಾನಪದ ಹಾಡುಗಾರಿಕೆ, ಪಾಪನಾಸಿಯ ಸುಧಾ ಪಾಟೀಲ್ ತಂಡದವರಿಂದ ಯೋಗ ಪ್ರದರ್ಶನ ಹಾಗೂ ಚಿಕ್ಕಟಿ ಸಮೂಹ ಶಾಲೆಯ ಮಕ್ಕಳಿಂದ ಭರತ ನಾಟ್ಯ, ಜಾನಪದ ನೃತ್ಯ ಪ್ರದರ್ಶನಗಳು ನಡೆದವು.
ಕಲಾ ವಿಕಾಸ ಪರಿಷತ್ ಪೋಷಕ ಡಾ. ಜಿ.ಬಿ. ಪಾಟೀಲ ಮಾತನಾಡಿ, ಕನ್ನಡ ದಿಗ್ಗಜ ಸಾಹಿತಿಗಳನ್ನು ಮತ್ತು ಅವರ ಸಾಂಸ್ಕೃತಿಕ ಪ್ರೀತಿಯನ್ನು ನೆನಪಿಸಿ, ಕಲಾವಿಕಾಸ ಪರಿಷತ್‌ನ ನಾಡ ನುಡಿಯ ಸೇವೆಯನ್ನು ಸ್ಮರಿಸಿಕೊಂಡರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಲಾ ವಿಕಾಸ ಪರಿಷತ್‌ನ ಹಿತೈಷಿಗಳೂ ಆದ ಖ್ಯಾತ ವೈದ್ಯ ಡಾ. ಜಿ.ಬಿ. ಬಿಡಿನಹಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.