ವಿಜಯಸಾಕ್ಷಿ ಸುದ್ದಿ, ಗದಗ: ಹಂಚಿಹೋಗಿದ್ದ ಪ್ರದೇಶಗಳನ್ನು ಒಂದುಗೂಡಿಸಿದ ಶ್ರೇಯಸ್ಸು ಏಕೀಕರಣಕ್ಕೆ ಹೋರಾಡಿದ ನೇತಾರರಿಗೆ ಸಲ್ಲುತ್ತದೆ. ಕನ್ನಡ ನಾಡು ಸಂಪತ್ತುಭರಿತವಾದ ನಾಡು ಎಂದು ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ನುಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2772ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಕೆಲಸಗಳು ಇನ್ನೂ ಹೆಚ್ಚಾಗಬೇಕು. ನಮ್ಮ ನಾಡು, ನಮ್ಮ ನುಡಿ ಎನ್ನದೆ ಮಾನವನೆದೆ ಸುಡುಗಾಡು ಎನ್ನುತ್ತಾರೆ ಕವಿ ಕುವೆಂಪು. ಕನ್ನಡಿಗರು ನಿರಭಿಮಾನಿಗಳಾಗದೇ ಕನ್ನಡಾಭಿಮಾನಿಗಳಾಗಬೇಕು. ಕನ್ನಡದ ಗ್ರಂಥಗಳನ್ನು ಓದುವುದರ ಮೂಲಕ ಕನ್ನಡದ ಸವಿಯನ್ನು ಸವಿಯಬಹುದು ಎಂದು ಆಶೀರ್ವಚನ ನೀಡಿದರು.
ಧಾರವಾಡದ ಅಂಜುಮನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ರುದ್ರೇಶ ಮೇಟಿ ಮಾತನಾಡಿ, ನಾನು ಚೆನ್ನಾಗಿ ಬದುಕಿದ್ದೇನೆ ಎಂದರೆ ಅದು ಕನ್ನಡದಿಂದ. ನನ್ನ ನೌಕರಿ ಕನ್ನಡದ್ದು. ನನ್ನ ಭಾಷೆ ಕನ್ನಡ. ನಾನು ಸಾಧನೆ ಮಾಡಿದ್ದು ಕನ್ನಡದಲ್ಲಿ. ಯುಪಿಎಸ್‌ಸಿಯಲ್ಲಿ ಕನ್ನಡ ಇದೆ. ಆದರೆ ಕೆಪಿಎಸ್‌ಸಿಯಲ್ಲಿ ಕನ್ನಡವಿಲ್ಲ. ನಮಗೆ ಪ್ರದೇಶದ ಪ್ರೀತಿಗಿಂತಲೂ ನಾಡಿನ ಬಗ್ಗೆ ಪ್ರೀತಿ ಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಡಾ. ಬಸವರಾಜ ಮಲ್ಲೂರು ಉಪಸ್ಥಿತರಿದ್ದರು. ಬೆಸ್ಟ್ ಪರ್ಫಾರ್ಮಿಂಗ್ ಐಟಿಐ ಆಫ್ ಕರ್ನಾಟಕ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಐಟಿಐ ಶಿರೋಳದ ಪ್ರಾಚಾರ್ಯ ಬಿ.ಎಸ್. ಸಾಲಿಮಠ ಹಾಗೂ ಸಿಬ್ಬಂದಿ ವರ್ಗದವರನ್ನು ಇದೇ ಸಂದರ್ಭದಲ್ಲಿ ಶ್ರೀಮಠದಲ್ಲಿ ಸನ್ಮಾನಿಸಲಾಯಿತು. ರಾಜೇಶ್ವರಿ ಕಲಾ ಕುಟೀರ ಗದಗ ಮಕ್ಕಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. ನಾಡು-ನುಡಿಯ ನೃತ್ಯ ರೂಪಕವನ್ನು ಸಿದ್ದಲಿಂಗ ನಗರದ ಬಸವೇಶ್ವರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು. ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು.
ಧರ್ಮಗ್ರಂಥ ಪಠಣವನ್ನು ವೃತ್ವಿಕ ವಿ. ಹೂಗಾರ, ವಚನ ಚಿಂತನವನ್ನು ಶ್ರೇಯಸ್ ವಿ. ಅಂಗಡಿ ನಡೆಸಿದರು. ದಾಸೋಹ ಸೇವೆಯನ್ನು ಬಸವರಾಜ ಭೀಮಪ್ಪ ಅಸ್ಕಿ, ದೇವರ ಹಿಪ್ಪರಗಿ ಮತ್ತು ಶಿವಪ್ಪ ಮಲ್ಲಪ್ಪ ಜಡಗೊಂಡ ಮತ್ತು ಕುಟುಂಬ ವರ್ಗದವರು ದೇವರ ಹಿಪ್ಪರಗಿಯಲ್ಲಿ ವಹಿಸಿದ್ದರು. ಸನ್ಮಾನಿತರ ಪರಿಚಯವನ್ನು ವೀರನಗೌಡ ಮರಿಗೌಡ್ರ ನಿರ್ವಹಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ, ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಸಮ್ಮುಖ ವಹಿಸಿದ್ದ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ಕನ್ನಡದ ಅನೇಕ ಆಯಾಮಗಳನ್ನು ಅವಲೋಕನ ಮಾಡುವುದು ಸಹಜ. ತೋಂಟದಾರ್ಯ ಮಠ ಕನ್ನಡಕ್ಕಾಗಿ ಕೈಯೆತ್ತಿದ ಮಠ. ಡಾ. ಸಿದ್ದಲಿಂಗ ಶ್ರೀಗಳು ಗೋಕಾಕ ಚಳವಳಿಯ ಸಂದರ್ಭದಲ್ಲಿ ಹೋರಾಟಗಾರರೊಂದಿಗೆ ತಹಸೀಲ್ದಾರ ಕಚೇರಿ ಮುಂದೆ ಕುಳಿತು ಹೋರಾಟ ಮಾಡಿದರು. ಕನ್ನಡಕ್ಕೆ ಹೋರಾಡಿದ ಮಹನೀಯರನ್ನು ಕೃತಜ್ಞತೆಯಿಂದ ನೆನೆಯಬೇಕು ಎಂದರು.



