ಕನ್ನಡದ ಬಗ್ಗೆ ನಟ ಕಮಲ್ ಹಾಸನ್ ಆಡಿರುವ ಮಾತುಗಳು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕಮಲ್ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಗೆ ಅವಕಾಶ ನೀಡುವುದಿಲ್ಲ ಎಂದು ಹಲವು ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಮಧ್ಯೆ ಕಮಲ್ ಸಿನಿಮಾ ರಿಲೀಸ್ ಗೆ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿವಾದದ ನಡುವೆಯೂ ಹಲವು ಥಿಯೇಟರ್ ಮಾಲಿಕರು ಸಿನಿಮಾ ರಿಲೀಸ್ ಗೆ ಮುಂದಾಗಿದ್ದಾರೆ. ಇದೀಗ ಕೆಲವು ಕನ್ನಡಪರ ಸಂಘಟನೆಗಳು ಥಿಯೇಟರ್, ಮಾಲ್ ಗಳಿಗೆ ಭೇಟಿ ನೀಡಿ ಕಮಲ್ ನಟನೆಯ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡಿದರೆ ಸ್ಕ್ರೀನ್ ಹರಿದು ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಇನ್ನೂ ಎರಡು ದಿನ ಮಾತ್ರವೇ ಭಾಕಿ ಇದೆ. ಇತ್ತ ಕಮಲ್ ಕನ್ನಡಿಗರ ಕ್ಷಮೆ ಕೇಳಲೇ ಬೇಕು ಎಂಬ ಒತ್ತಾಯ ಕೇಳಿ ಬರ್ತಿದೆ. ಆದ್ರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಕಮಲ್ ವಿದೇಶದಲ್ಲಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ.
ಕೆ.ಜಿ ರಸ್ತೆಯ ಭೂಮಿಕ ಚಿತ್ರಮಂದಿರಕ್ಕೆ ಭೇಟಿ ಕೊಟ್ಟ ಕನ್ನಡ ಸಂಘಟನೆ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಸಿನಿಮಾ ರಿಲೀಸ್ ಮಾಡಬಾರದು ಎಂದು ಥಿಯೇಟರ್ ಆಡಳಿತ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.
ಕಮಲ್ ಹಾಸನ್ ಕ್ಷಮೆ ಕೇಳದೇ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡುವಂತಿಲ್ಲ. ಒಂದು ವೇಳೆ ಸಿನಿಮಾ ಬಿಡುಗಡೆ ಮಾಡಿದ್ರೆ ಪ್ರತಿಭಟನೆ ಮಾಡ್ತೇವೆ. ಚಿತ್ರಮಂದಿರದ ಸ್ಕ್ರೀನ್ ಹರಿದು ಹಾಕ್ತೇವೆ ಎಂದು ರೂಪೇಶ್ ರಾಜಣ್ಣ ವಾರ್ನಿಂಗ್ ಕೊಟ್ಟಿದ್ದಾರೆ.
ಮಂತ್ರಿ ಮಾಲ್‌ಗೂ ಭೇಟಿ ಕೊಟ್ಟ ಕನ್ನಡ ಸಂಘಟನೆಯ ನಾಯಕರು ಮಾಲ್ ಆಡಳಿತ ಸಿಬ್ಬಂದಿಗೆ ಮನವಿ ಮಾಡಿದರು. ಮಂತ್ರಿ ಮಾಲ್ ಸಿನಿಮಾ ಹೆಡ್ ಶಬೀರ್ ಅವರು ಕನ್ನಡ ಸಂಘಟನೆಗಳು ಮನವಿ ಕೊಟ್ಟಿದೆ. ಈ ವಿಚಾರವನ್ನ ಮ್ಯಾನೇಜ್ಮೆಂಟ್‌ಗೆ ತಿಳಿಸುತ್ತೇವೆ. ಸಿನಿಮಾ ರಿಲೀಸ್ ಆಗಲ್ಲ. ಟಿಕೆಟ್ ಬುಕ್ಕಿಂಗ್ ಸಹ ಓಪನ್ ಆಗಿಲ್ಲ. ಕಮಲ್ ಹಾಸನ್ ಅವರು ಕ್ಷಮಾಪಣೆ ಕೇಳಬೇಕು ಎಂದು ಮಂತ್ರಿ ಮಾಲ್ ಸಿನಿಮಾ ಹೆಡ್ ಶಬೀರ್ ಹೇಳಿಕೆ ನೀಡಿದರು.
ಒರಿಯಾನ್ ಮಾಲ್‌ಗೆ ಭೇಟಿ ಕೊಟ್ಟ ಕನ್ನಡಪರ ಸಂಘಟನೆಗಳು ನಾವು ಲವ್ ಲೆಟರ್ ಕೊಡೋದಕ್ಕೆ ಇಲ್ಲಿಗೆ ಬಂದಿಲ್ಲ. ನೀವು ಸಿನಿಮಾ ರಿಲೀಸ್ ಮಾಡಿದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿ ಬಂದಿದ್ದಾರೆ.