ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ವೈದ್ಯಕೀಯ ಸಂಘ ಗದಗ ಶಾಖೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ-ಸಡಗರದೊಂದಿಗೆ ಆಚರಿಸಲಾಯಿತು.
ಐಎಂಎ ಎದುರಿಗೆ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಗದಗ ಐಎಂಎ ಶಾಖೆಯ ಅಧ್ಯಕ್ಷ ಡಾ. ಶ್ರೀಧರ ಕುರಡಗಿ, ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಣ್ಣಿಸಿ ಕನ್ನಡವೇ ನಮ್ಮ ಹೆಮ್ಮೆ. ಕನ್ನಡಿಗರ ಸೇವಾ ಮನೋಭಾವವೇ ನಮ್ಮ ಶಕ್ತಿ ಎಂದರು.
ತಮ್ಮ ವೈದ್ಯಕೀಯ ವೃತ್ತಿಯ ನಡುವೆಯೂ ಕನ್ನಡ ಸಾಹಿತ್ಯ, ಕನ್ನಡ ಭಾಷೆಯ ಅಭಿಮಾನ ಇಟ್ಟುಕೊಂಡು ಕನ್ನಡದ ಕೆಲಸ ಮಾಡುತ್ತಿರುವ ಡಾ. ಜಿ.ಬಿ. ಬಿಡಿನಹಾಳ, ಡಾ. ಎಸ್.ಬಿ. ಶೆಟ್ಟರ, ಡಾ. ಸಲೀಂ ಜಮಾದಾರ, ಡಾ. ಧನೇಶ ದೇಸಾಯಿ, ಡಾ. ಬಸವರಾಜ ಬೊಮ್ಮನಹಳ್ಳಿ ಅವರನ್ನು ಐಎಂಎ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ಕುಟುಂಬದವರು ಕನ್ನಡ ಗೀತ ಗಾಯನ ಹಾಗೂ ದೇಶಭಕ್ತಿಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಕನ್ನಡ ಬಣ್ಣಗಳಿಂದ ಸಿಂಗಾರಗೊಂಡ ಐಎಂಎ ಕಚೇರಿಯಲ್ಲಿ ವೈದ್ಯರ ಮಕ್ಕಳು ಕನ್ನಡ ಕುರಿತ ಕವನ, ಭಾಷಣ ಪ್ರದರ್ಶನ ಮಾಡಿ ಕಾರ್ಯಕ್ರಮದ ಕಳೆ ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಡಾ. ಸುನೀತಾ ಕುರಡಗಿ, ಡಾ. ರಾಹುಲ್ ಶಿರೋಳ, ಡಾ. ಜಯರಾಜ್ ಪಾಟೀಲ್ ಸೇರಿದಂತೆ ಸದಸ್ಯರು, ಐಎಂಎ ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.



