ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಹಾಗೂ ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ. ಎಂ. ಬುರಡಿಯವರು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕನ್ನಡ ಭಾಷೆ ೨ ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಸಾರ್ವಜನಿಕ ಮತ್ತು ಸಾಮುದಾಯಿಕ ಜೀವನದಲ್ಲಿ ಕನ್ನಡವು ಪ್ರಥಮ ಭಾಷೆಯಾಗಬೇಕು ಎಂದರಲ್ಲದೆ, ಕನ್ನಡ ಭಾಷೆ, ನೆಲ, ಜಲಗಳಿಗೆ ಧಕ್ಕೆ ಉಂಟಾದಾಗ ಧ್ವನಿ ಎತ್ತಿದ ಪೂಜ್ಯ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಶ್ರೀಗಳ ಕನ್ನಡಾಭಿಮಾನವನ್ನು ಸ್ಮರಿಸಿಕೊಂಡರು.
ಶ್ರೀ ಸಿದ್ಧೇಶ್ವರ ಪಿ.ಯು ಕಾಲೇಜಿನ ಪ್ರಾಚಾರ್ಯ ವೈ.ಎಸ್. ಮತ್ತೂರ ಮಾತನಾಡಿ ಕರ್ನಾಟಕ ಏಕೀಕರಣದ ಇತಿಹಾಸವನ್ನು ಪರಿಚಯಿಸಿದರು. ಪ್ರೊ ಎಸ್.ಎಸ್. ಭಜೆಂತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


