ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾವಿರಾರು ವರ್ಷಗಳಷ್ಟು ಪುರಾತನವಾಗಿರುವ ನಮ್ಮ ಕನ್ನಡ ಭಾಷೆ ನಮ್ಮ ಹೆಮ್ಮೆ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ಅಭಿಮಾನ ಇರುವದು ಬೇಡ, ಇದು ನಿರಂತರವಾಗಿರಲಿ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಅಶ್ವಿನಿ ಅಂಕಲಕೋಟಿ ಹೇಳಿದರು.
ಅವರು ಶನಿವಾರ ಪಟ್ಟಣದ ಪುರಸಭೆಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇವಲ ಬಾಯಿ ಮಾತಿನಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ. ಕನ್ನಡ ನಮ್ಮ ಉಸಿರಾಗಬೇಕು, ಕನ್ನಡವನ್ನು ಕಟ್ಟಲು ಹಿರಿಯರು ಮಾಡಿದ ಶ್ರಮವನ್ನು ಅರ್ಥಮಾಡಿಕೊಳ್ಳಬೇಕು. ರಾಜ್ಯೋತ್ಸವ ಒಂದು ದಿನಕ್ಕೆ ಆಚರಿಸಿ ಹೋಗುವುದಕ್ಕಿಂತ ಕನ್ನಡದ ಬಗ್ಗೆ ಜನರಿಗೆ, ವಿದ್ಯಾರ್ಥಿಗಳಿಗೆ ನಿತ್ಯ ಮಾಹಿತಿ ನೀಡುವ ಕಾರ್ಯ ಮಾಡಿ ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸುವಂತಾಗಬೇಕು ಎಂದರು.
ಹಿರಿಯ ಸದಸ್ಯ ಪ್ರವೀಣ ಬಾಳಿಕಾಯಿ ಮಾತನಾಡಿ, ಕನ್ನಡ ಭಾಷೆಗಿರುವ ಸಾಮರ್ಥ್ಯ ಮತ್ತಾವುದೇ ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಅವಧಿಯಲ್ಲಿ ಈ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ್ದು, ಹಿರಿಯರು ರಾಜ್ಯವನ್ನು ಕಟ್ಟಲು ಪಟ್ಟ ಶ್ರಮಕ್ಕೆ ತಕ್ಕಂತೆ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಪೀರದೋಷ ಆಡೂರ, ಸದಸ್ಯರಾದ ಜಯಕ್ಕ ಅಂದಲಗಿ, ಶಾಂತವ್ವ ಗುಂಜಳ, ನೀಲವ್ವ ಮೆಣಸಿನಕಾಯಿ, ಮಂಜುಳಾ ನಂದೆಣ್ಣವರ, ಮಹೇಶ ಹುಲಬಜಾರ, ಮಹಾದೇವಪ್ಪ ಅಣ್ಣಿಗೇರಿ, ಎಸ್.ಕೆ. ಹವಾಲ್ದಾರ, ನೀಲಪ್ಪ ಪೂಜಾರ, ಪ್ರಕಾಶ ಕೊಂಚಿಗೇರಿಮಠ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶೋಭಾ ಬೆಳ್ಳಿಕೊಪ್ಪ, ಮಂಜುನಾಥ ಮುದಗಲ್, ಹನುಮಂತ ನಂದೆಣ್ಣವರ, ಎಸ್.ಪಿ. ಲಿಂಬಯ್ಯನಮಠ, ಸುರೇಶ ಪೂಜಾರ, ವೆಂಕಟೇಶ ರಾಮಗಿರಿ, ಎಂ.ಎಸ್. ಹೆಬ್ಬಾಳ, ನೇತ್ರಾ ಹೊಸಮನಿ ಮುಂತಾದವರು ಹಾಜರಿದ್ದರು.


